ಅಡಕೆ ಬೀಳದಿರಲಿ ಕೆಳಕ್ಕೆ

ಮಲೆನಾಡು ಭಾಗದ ಪ್ರಮುಖ ಜಿಲ್ಲೆ ಉತ್ತರ ಕನ್ನಡ .ಮಲೆನಾಡು ಮತ್ತು ಕರಾವಳಿ ಪ್ರದೇಶವನ್ನು ಒಳಗೊಂಡಿದ್ದು, ರಾಜ್ಯದಲ್ಲಿನ ಹೆಚ್ಚು ಮಳೆ ಬೀಳುವ ಜಿಲ್ಲೆಗಳಲ್ಲಿ ಒಂದು. ನಾವು ಇಲ್ಲಿ ತಲೆತಲಾಂತರದಿಂದಲೂ ಅಡಕೆಯನ್ನೇ ಮುಖ್ಯ ಬೆಳೆಯನ್ನಾಗಿ ಬೆಳೆದುಕೊಂಡು ಬಂದಿದ್ದೇವೆ. ಸಾಂಪ್ರದಾಯಿಕವಾಗಿ ಅಡಕೆ ಬೆಳೆಯುವ ಪ್ರದೇಶವಿದು. ಒಂದು ಕಾಲದಲ್ಲಿ ರಾಜ್ಯದಲ್ಲೇ ಅತ್ಯಂತ ಹೆಚ್ಚು ಅಡಕೆ ಬೆಳೆಯುವ ಜಿಲ್ಲೆ ನಮ್ಮದಾಗಿತ್ತು. ಸುಮಾರು ಹದಿನೈದು ವರ್ಷಗಳಿಂದೀಚೆ ಅಡಕೆಗೆ ಉತ್ತಮ ದರ ಬರಲು ಆರಂಭವಾದ್ದರಿಂದ ಅಸಾಂಪ್ರದಾಯಿಕ ಪ್ರದೇಶದಲ್ಲೂ ಅಡಕೆ ತೋಟಗಳು ತಲೆಯೆತ್ತತೊಡಗಿದವು. ನಮ್ಮದು ಗುಡ್ಡಗಾಡು ಪ್ರದೇಶವಾದ್ದರಿಂದ, ಮಳೆ ಹೆಚ್ಚು ಬೀಳುವುದರಿಂದ, ಮಣ್ಣಿನ ಫಲವತ್ತತೆಯು ಸಾಮಾನ್ಯವಾಗಿರುವುದರಿಂದ ಸಹಜವಾಗಿ ತೋಟಗಳು ಹೆಚ್ಚಿನ ಕೆಲಸವನ್ನು ಬಯಸುತ್ತಿವೆ. ಆದರೆ ಬಯಲು ಸೀಮೆಗಳಲ್ಲಿ ನಮ್ಮಲ್ಲಿರುವ ಯಾವ ಸಮಸ್ಯೆಯೂ ಇಲ್ಲದಿರು ವುದರಿಂದ ಕಡಿಮೆ ಖರ್ಚಿನಲ್ಲಿ ತೋಟದ ನಿರ್ವಹಣೆ ಆಗುವುದರೊಂದಿಗೆ ಉತ್ತಮ ಫಸಲು ಕೂಡ ದೊರೆಯುತ್ತದೆ. ಆದರೆ ಹೀಗೆ ಆಗಲು ಸಾಕಷ್ಟು ನೀರು ಬೇಕು ಎನ್ನುವುದನ್ನೂ ಮರೆಯುವಂತಿಲ್ಲ. ...