ಪರಿಸರದ ಮೇಲೆ ಮಾನವನ ದೌರ್ಜನ್ಯ
ನಾವು ವಾಸಿಸುತ್ತಿರುವ ಸುತ್ತಮುತ್ತಲಿನ ವಾತಾವರಣವೇ ನಮ್ಮ ಪರಿಸರ. ಇದು ಮಾನವನ ಸಾಮಾಜಿಕ, ಮಾನಸಿಕ, ದೈಹಿಕ ಬೆಳವಣಿಗೆಗಳ ಮೇಲೆ ಪರಿಣಾಮ ಬೀರುತ್ತದೆ. ಪರಿಸರವಿಲ್ಲದೆ ನಮ್ಮ ಅಸ್ತಿತ್ವಕ್ಕೆ ಯಾವುದೇ ಬೆಲೆಯಿಲ್ಲ. ಇಂದೂ ಕೂಡ ಪ್ರತಿಯೊಬ್ಬರೂ ಪರಿಸರದ ಬಗ್ಗೆ ಅರಿಯುವ ಅಗತ್ಯವಿದೆ. ಸುತ್ತಮುತ್ತಲೂ ವೈವಿಧ್ಯಮಯವಾದ ನಿಸರ್ಗದ ಸೊಬಗಿದೆ. ಹಲವಾರು ಗಿಡ ಮರಗಳಿವೆ. ವಿವಿಧ ಪ್ರಕಾರದ ಪ್ರಾಣಿ ಪಕ್ಷಿಗಳಿಗೆ. ಅನೇಕ ಸೂಕ್ಷ್ಮಜೀವಿಗಳಿವೆ. ಗುಡ್ಡ,ಬೆಟ್ಟ, ದೊಡ್ಡ ದೊಡ್ಡ ಪರ್ವತ ಶಿಖರಗಳು ಇದೆ. ಆದರೆ ವಿಜ್ಞಾನ,ತಂತ್ರಜ್ಞಾನ, ಅಭಿವೃದ್ಧಿ, ಆಧುನಿಕತೆ, ನಗರೀಕರಣ, ಕೈಗಾರೀಕರಣ ಎಂಬ ಹಲವು ಕಾರಣಗಳಿಗಾಗಿ ಅನೇಕ ರೀತಿಯಲ್ಲಿ ಅರಿತೋ ಅರಿಯದೆಯೋ ಪರಿಸರಕ್ಕೆ ತೀವ್ರ ಹಾನಿಯನ್ನುಂಟು ಮಾಡುತ್ತಿದ್ದೇವೆ. ಇತ್ತೀಚೆಗಂತೂ ವಿಸ್ತರಣೆ ಹೊಂದುತ್ತಿರುವ ರೈಲು ಮಾರ್ಗ, ವಾಹನಗಳಿಗಾಗಿ ರಚನೆಯಾಗುತ್ತಿರುವ ರಸ್ತೆಗಳು,ದೊಡ್ಡ ದೊಡ್ಡ ಕಟ್ಟಡಗಳಿಗಾಗಿ ನಿರಂತರವಾಗಿ ಕಡಿಯುತ್ತಿರುವ ಮರಗಳು,ಇತ್ಯಾದಿಗಳಿಂದ ಮಾಲಿನ್ಯಗಳು ಹೆಚ್ಚಾಗುತ್ತಿದ್ದು ಹವಾಮಾನ ವೈಪರಿತ್ಯ ಉಂಟಾಗುತ್ತಿದೆ. ಅಲ್ಲದೆ ಹೆಚ್ಚುತ್ತಿರುವ ಜನಸಂಖ್ಯೆ, ಹೊಗೆ ಬರುವ ವಾಹನ, ವಾಹನಗಳ ಸಂದಣಿ, ಪ್ಲಾಸ್ಟಿಕ್ ಇತ್ಯಾದಿಗಳಿಂದ ನಮ್ಮ ಪರಿಸರ ಹಾಳಾಗುತ್ತಿದೆ. ...