ಅಡಕೆ ಬೀಳದಿರಲಿ ಕೆಳಕ್ಕೆ

 

                  ಮಲೆನಾಡು ಭಾಗದ ಪ್ರಮುಖ ಜಿಲ್ಲೆ ಉತ್ತರ ಕನ್ನಡ .ಮಲೆನಾಡು ಮತ್ತು ಕರಾವಳಿ ಪ್ರದೇಶವನ್ನು ಒಳಗೊಂಡಿದ್ದು, ರಾಜ್ಯದಲ್ಲಿನ ಹೆಚ್ಚು ಮಳೆ ಬೀಳುವ ಜಿಲ್ಲೆಗಳಲ್ಲಿ ಒಂದು. ನಾವು ಇಲ್ಲಿ ತಲೆತಲಾಂತರದಿಂದಲೂ ಅಡಕೆಯನ್ನೇ ಮುಖ್ಯ ಬೆಳೆಯನ್ನಾಗಿ ಬೆಳೆದುಕೊಂಡು ಬಂದಿದ್ದೇವೆ. ಸಾಂಪ್ರದಾಯಿಕವಾಗಿ ಅಡಕೆ ಬೆಳೆಯುವ ಪ್ರದೇಶವಿದು. ಒಂದು ಕಾಲದಲ್ಲಿ ರಾಜ್ಯದಲ್ಲೇ ಅತ್ಯಂತ ಹೆಚ್ಚು ಅಡಕೆ ಬೆಳೆಯುವ ಜಿಲ್ಲೆ ನಮ್ಮದಾಗಿತ್ತು.

                  

                   ಸುಮಾರು ಹದಿನೈದು ವರ್ಷಗಳಿಂದೀಚೆ ಅಡಕೆಗೆ ಉತ್ತಮ ದರ ಬರಲು ಆರಂಭವಾದ್ದರಿಂದ ಅಸಾಂಪ್ರದಾಯಿಕ  ಪ್ರದೇಶದಲ್ಲೂ ಅಡಕೆ ತೋಟಗಳು ತಲೆಯೆತ್ತತೊಡಗಿದವು. ನಮ್ಮದು ಗುಡ್ಡಗಾಡು ಪ್ರದೇಶವಾದ್ದರಿಂದ, ಮಳೆ ಹೆಚ್ಚು ಬೀಳುವುದರಿಂದ, ಮಣ್ಣಿನ ಫಲವತ್ತತೆಯು ಸಾಮಾನ್ಯವಾಗಿರುವುದರಿಂದ ಸಹಜವಾಗಿ ತೋಟಗಳು ಹೆಚ್ಚಿನ ಕೆಲಸವನ್ನು ಬಯಸುತ್ತಿವೆ. ಆದರೆ ಬಯಲು ಸೀಮೆಗಳಲ್ಲಿ ನಮ್ಮಲ್ಲಿರುವ ಯಾವ ಸಮಸ್ಯೆಯೂ ಇಲ್ಲದಿರು


ವುದರಿಂದ ಕಡಿಮೆ ಖರ್ಚಿನಲ್ಲಿ ತೋಟದ ನಿರ್ವಹಣೆ ಆಗುವುದರೊಂದಿಗೆ ಉತ್ತಮ ಫಸಲು ಕೂಡ ದೊರೆಯುತ್ತದೆ. ಆದರೆ ಹೀಗೆ ಆಗಲು ಸಾಕಷ್ಟು ನೀರು ಬೇಕು ಎನ್ನುವುದನ್ನೂ ಮರೆಯುವಂತಿಲ್ಲ.


              ಉತ್ತರ ಕರ್ನಾಟಕದ ಅನೇಕ ಭಾಗಗಳಲ್ಲಿ ಸರ್ಕಾರವು ಆಹಾರ ಬೆಳೆ ಬೆಳೆಯಲು ನದಿಗಳ ನೀರನ್ನು ಚಾನಲ್ ಗಳ ಮುಖಾಂತರ ಒದಗಿಸುತ್ತಿದೆ. ಆದರೆ ಈಗ ಅಲ್ಲಿನ ರೈತರು ಚಾನೆಲ್ ನೀರಿನಿಂದ ವಾಣಿಜ್ಯ ಬೆಳೆಯಾದ ಅಡಕೆಯನ್ನು ಬೆಳೆಯುತ್ತಿದ್ದಾರೆ. ಈ ಕುರಿತು ಸರ್ಕಾರಕ್ಕೆ ಮನವಿ ಸಲ್ಲಿಸಿದರೆ, ಸರ್ಕಾರದಲ್ಲಿದ್ದವರದ್ದೇ ಸಾವಿರಾರು ಎಕರೆ ಅಡಕೆ ತೋಟಗಳು ಚಾನಲ್ ಗಳ ನೀರನ್ನು ಕುಡಿಯುತ್ತಿವೆ.


                  ಈ ರೀತಿ ಅಡಕೆ ಬೆಳೆ ವ್ಯಾಪಿಸುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಅಡಕೆ ದರ ಕುಸಿತ ಕಾಣುವುದು ೯೯%  ಸತ್ಯ.ದೇವರ ದಯೆಯಿಂದ ಹಾಗಾಗಬಾರದು. ಒಂದು ವೇಳೆ ದರ ಕುಸಿದರೆ ಬಯಲು ಸೀಮೆಯವರು ಅಡಕೆ ಮರಗಳನ್ನು ನೆಲಸಮ ಮಾಡಿ ಮತ್ತೆ ಮೂರು ತಿಂಗಳೊಳಗೆ ಬೇರೆ ಬೆಳೆಯನ್ನು ತೆಗೆಯುತ್ತಾರೆ. ಆದರೆ ನಮ್ಮಲ್ಲಿಯ ಮಣ್ಣು, ಪರಿಸರ, ಕಾಡುಪ್ರಾಣಿಗಳ ಹಾವಳಿ, ಹಾಗೂ ವಾತಾವರಣ ಇತ್ಯಾದಿಗಳಿಂದಾಗಿ ಅಡಕೆ, ಸ್ವಲ್ಪಮಟ್ಟಿಗೆ ಕಾಳುಮೆಣಸನ್ನು ಹೊರತುಪಡಿಸಿದರೆ ಇತರ ಬೆಳೆಗಳು ಅಷ್ಟೊಂದು ಸೂಕ್ತವಲ್ಲವಾದ್ದರಿಂದ ಪರ್ಯಾಯ ಬೆಳೆ ಬೆಳೆದರೂ ಲಾಭವಾಗುತ್ತದೆ ಎನ್ನುವ ನಂಬಿಕೆ ಇಲ್ಲದಾಗಿದೆ. 


       ನಮ್ಮ ಪೂರ್ವಜರು ಅಡಕೆಯನ್ನು ಪ್ರಧಾನ ಬೆಳೆಯನ್ನಾಗಿ ಬೆಳೆದರೂ ಕೂಡ ಕಾಳುಮೆಣಸನ್ನು ಉಪ ಬೆಳೆಯನ್ನಾಗಿ ಬೆಳೆಯುತ್ತಿದ್ದರು. ಆದರೆ ವಿಪರೀತ ಮಳೆಯಿಂದಾಗಿ ಕಾಳು ಮೆಣಸಿನ ಬಳ್ಳಿಗಳಿಗೆ ಸೊರಗು ರೋಗ ಬರುವುದರಿಂದ ಬಳ್ಳಿಯನ್ನು ಉಳಿಸಿಕೊಳ್ಳುವುದೇ ದೊಡ್ಡ ತಲೆನೋವಾಗಿದೆ. ಆದರೆ ಇಂದು ಅಡಕೆಯ ಮೇಲೆ ಭರವಸೆ ಕಡಿಮೆಯಾಗುತ್ತಿರುವುದರಿಂದ ಬದುಕಿ ಬಾಳುವ ಸಲುವಾಗಿ ಮೆಣಸಿನ ಸೊರಗು ರೋಗದ ತಲೆನೋವನ್ನು, ವಿಜ್ಞಾನಿಗಳ ಸಲಹೆಯ ಮೇರೆಗೆ ವಿವಿಧ ಸಸ್ಯ ಸಂರಕ್ಷಣಾ ಕ್ರಮಗಳನ್ನು ಕೈಗೊಂಡು, ಸೊರಗು ರೋಗ ತಾಳುವ ತಳಿಯನ್ನು ಬೆಳೆಸಿ,  ವ್ಯವಸ್ಥಿತವಾಗಿ ನಿರ್ವಹಿಸಿ ನಿವಾರಿಸಲು ಪ್ರಯತ್ನಿಸುವುದು ಅವಶ್ಯವಾಗಿದೆ.ಅನೇಕ ವರ್ಷಗಳ ಹಿಂದೆಯೇ ನಮ್ಮಲ್ಲಿ ಕಾಫಿ ಬೆಳೆಯ ಪರಿಚಯವಾದರೂ ಕೂಡ ಅಷ್ಟೊಂದು ಯಶಸ್ಸು ಇಲ್ಲವಾಗಿತ್ತು. ಆದರೆ ಇತ್ತೀಚೆಗೆ ನಮ್ಮಲ್ಲಿನ ಕೆಲವು ಪ್ರಗತಿ ಪರ ರೈತರು ತಜ್ಞರ ಮಾರ್ಗದರ್ಶನದಲ್ಲಿ ಕಾಫಿಯನ್ನು ವ್ಯವಸ್ಥಿತವಾಗಿ ಬೆಳೆಸಿ ಯಶಸ್ಸಿನೆಡೆಗೆ ಸಾಗುತ್ತಿರುವುದರಿಂದ  ಕಾಫಿಯನ್ನು ಕೂಡ ಉಪ ಬೆಳೆಯನ್ನಾಗಿ ಬೆಳೆಯಬಹುದೇನೋ ಅನ್ನಿಸುತ್ತದೆ.

    

               ಹಾಗಾಗಿ ಮುಖ್ಯ ಬೆಳೆಯಾದ ಅಡಕೆಗೆ ನೀಡುವ ಪ್ರಾಮುಖ್ಯತೆಯನ್ನೇ ಉಪ ಬೆಳೆಗಳಾದ ಕಾಳುಮೆಣಸು ಮತ್ತು ಕಾಫಿಗೆ ನೀಡಿದರೆ ಭವಿಷ್ಯದಲ್ಲಿ ಆಗಬಹುದಾದ ಅನಾಹುತಗಳಿಂದ ತಪ್ಪಿಸಿಕೊಳ್ಳಬಹುದಾಗಿದೆ.

                   

          - ಸುಶಾಂತ ಕೊಪ್ಪೇಸರ.

       ಪತ್ರಿಕೋದ್ಯಮ ವಿಭಾಗ, 

 ಎಂ.ಇ.ಎಸ್  ಕಾಲೇಜು ಶಿರಸಿ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಅಳಿವಿನಂಚಿನಲ್ಲಿರುವ ಕಗ್ಗ

ಪ್ರಕೃತಿಯ ಮಡಿಲಿನಲ್ಲೊಂದು ಸುಂದರ ತಾಣ ಮತ್ತಿಘಟ್ಟ