ಗುರಿ ಇಲ್ಲದ ಜೀವನ ಗೋಪುರವಿಲ್ಲದ ಗುಡಿ ಇದ್ದಂತೆ
ಜೀವನ ಎಂಬ ಮುಖ್ಯ ಘಟ್ಟಗಳಲ್ಲಿ ಯಶಸ್ಸನ್ನು ಕಾಣಲು ಗುರಿಯು ಅತ್ಯವಶ್ಯವಾಗಿದೆ.ಮನುಷ್ಯನಾಗಿ ಹುಟ್ಟಿದ ಮೇಲೆ ಜೀವನದಲ್ಲಿ ಏಳು ಬೀಳುಗಳು ಸಹಜ. ಅವೆಲ್ಲವನ್ನು ದಾಟಿಕೊಂಡು ಮುಂದೆ ಹೋಗುವುದೇ ಜೀವನ.ಒಬ್ಬ ಮನುಷ್ಯನಿಗೆ ಜೀವನದಲ್ಲಿ ಸಾಧನೆ ಮಾಡಲು ಯಾವುದಾದರೂ ಒಂದು ಗುರಿ ಇದ್ದೇ ಇರುತ್ತದೆ. ಗುರಿಯನ್ನು ಇಟ್ಟುಕೊಳ್ಳದೇ ಇರುವವರ ಮೌಲ್ಯ ಶೂನ್ಯಕ್ಕೆ ಸಮಾನ. ಪ್ರತಿಯೊಬ್ಬರಿಗೂ ಗುರಿ ಅನ್ನುವುದು ಖಂಡಿತವಾಗಿಯೂ ಇದ್ದೇ ಇರುತ್ತದೆ. ಏನಾದರೂ ಸಾಧನೆ ಮಾಡಿದರೆ ಅಷ್ಟೇ ಈ ಜಗತ್ತಿನಲ್ಲಿ ನಮಗೆ ಮೌಲ್ಯ ಇರುತ್ತದೆ.ಗುರಿಯನ್ನು ಇಟ್ಟುಕೊಂಡರೆ ಆಗದು,ಅದಕ್ಕೆ ಬೇಕಾದ ಹಾಗೂ ಅಗತ್ಯವಾದ ಪರಿಶ್ರಮ ಕೂಡ ಮುಖ್ಯವಾಗಿರುತ್ತದೆ.ಗುರಿಯನ್ನು ಇಟ್ಟುಕೊಳ್ಳುವುದು ದೊಡ್ಡ ವಿಷಯವೇನಲ್ಲ ,ಕನಸಿನಲ್ಲಿಯೂ ಗುರಿ ಇಟ್ಟುಕೊಳ್ಳಬಹುದು.ಕನಸು ಕಂಡರಷ್ಟೇ ಸಾಧ್ಯವಿಲ್ಲ.ಕನಸನ್ನು ಪ್ರತಿಯೊಬ್ಬರೂ ಕಾಣುತ್ತಾರೆ. ಆದರೆ ಆ ಕನಸಿನಲ್ಲಿ ಕಂಡಂತ ಗುರಿಯನ್ನು ಯಶಸ್ವಿಯಾಗಿ ಪೂರೈಸುವುದು ಬೆರಳೆಣಿಕೆಯ ಜನರಷ್ಟೇ.ಕೈ ಕೆಸರಾದರೆ ಮಾತ್ರ ಬಾಯಿ ಮೊಸರು ಆಗುತ್ತದೆ. ಈಗ ಕಷ್ಟಪಟ್ಟರೆ ಮಾತ್ರ ಮುಂದೆ ಸುಖ ಜೀವನ ದೊರಕುತ್ತದೆ. ಈಗ ಸುಖವುಂಡರೆ ಮುಂದಿನ ದಿನಗಳಲ್ಲಿ ಕಣ್ಣೀರಲ್ಲಿ ಕೈತೊಳಿಯಬೇಕಾಗುತ್ತದೆ. ...