ಗುರಿ ಇಲ್ಲದ ಜೀವನ ಗೋಪುರವಿಲ್ಲದ ಗುಡಿ ಇದ್ದಂತೆ

 


ಜೀವನ ಎಂಬ ಮುಖ್ಯ ಘಟ್ಟಗಳಲ್ಲಿ  ಯಶಸ್ಸನ್ನು ಕಾಣಲು ಗುರಿಯು ಅತ್ಯವಶ್ಯವಾಗಿದೆ.ಮನುಷ್ಯನಾಗಿ ಹುಟ್ಟಿದ ಮೇಲೆ ಜೀವನದಲ್ಲಿ ಏಳು ಬೀಳುಗಳು ಸಹಜ. ಅವೆಲ್ಲವನ್ನು ದಾಟಿಕೊಂಡು ಮುಂದೆ ಹೋಗುವುದೇ ಜೀವನ.ಒಬ್ಬ ಮನುಷ್ಯನಿಗೆ ಜೀವನದಲ್ಲಿ ಸಾಧನೆ ಮಾಡಲು ಯಾವುದಾದರೂ ಒಂದು ಗುರಿ ಇದ್ದೇ ಇರುತ್ತದೆ. ಗುರಿಯನ್ನು ಇಟ್ಟುಕೊಳ್ಳದೇ ಇರುವವರ ಮೌಲ್ಯ ಶೂನ್ಯಕ್ಕೆ ಸಮಾನ.

               ಪ್ರತಿಯೊಬ್ಬರಿಗೂ ಗುರಿ ಅನ್ನುವುದು ಖಂಡಿತವಾಗಿಯೂ ಇದ್ದೇ ಇರುತ್ತದೆ. ಏನಾದರೂ ಸಾಧನೆ ಮಾಡಿದರೆ ಅಷ್ಟೇ ಈ ಜಗತ್ತಿನಲ್ಲಿ ನಮಗೆ ಮೌಲ್ಯ ಇರುತ್ತದೆ.ಗುರಿಯನ್ನು ಇಟ್ಟುಕೊಂಡರೆ ಆಗದು,ಅದಕ್ಕೆ ಬೇಕಾದ ಹಾಗೂ ಅಗತ್ಯವಾದ ಪರಿಶ್ರಮ ಕೂಡ ಮುಖ್ಯವಾಗಿರುತ್ತದೆ.ಗುರಿಯನ್ನು ಇಟ್ಟುಕೊಳ್ಳುವುದು ದೊಡ್ಡ ವಿಷಯವೇನಲ್ಲ ,ಕನಸಿನಲ್ಲಿಯೂ ಗುರಿ ಇಟ್ಟುಕೊಳ್ಳಬಹುದು.ಕನಸು ಕಂಡರಷ್ಟೇ ಸಾಧ್ಯವಿಲ್ಲ.ಕನಸನ್ನು ಪ್ರತಿಯೊಬ್ಬರೂ ಕಾಣುತ್ತಾರೆ. ಆದರೆ ಆ ಕನಸಿನಲ್ಲಿ ಕಂಡಂತ ಗುರಿಯನ್ನು ಯಶಸ್ವಿಯಾಗಿ ಪೂರೈಸುವುದು ಬೆರಳೆಣಿಕೆಯ ಜನರಷ್ಟೇ.ಕೈ ಕೆಸರಾದರೆ ಮಾತ್ರ ಬಾಯಿ ಮೊಸರು ಆಗುತ್ತದೆ. ಈಗ ಕಷ್ಟಪಟ್ಟರೆ ಮಾತ್ರ ಮುಂದೆ ಸುಖ ಜೀವನ ದೊರಕುತ್ತದೆ.  ಈಗ ಸುಖವುಂಡರೆ ಮುಂದಿನ ದಿನಗಳಲ್ಲಿ ಕಣ್ಣೀರಲ್ಲಿ ಕೈತೊಳಿಯಬೇಕಾಗುತ್ತದೆ.


                           ವ್ಯಕ್ತಿಯು ಸಾಧ್ಯವಾದಷ್ಟು ಬೇಗ ಯಶಸ್ಸನ್ನು ಸಾಧಿಸಲು  ಬಯಸುತ್ತಾನೆ.ಒಬ್ಬ ವ್ಯಕ್ತಿ ಸಾಧನೆ ಮಾಡಿದಾನೆಂದರೆ ಕೆಲವರು ಹೊಗಳುತ್ತಾರೆ ಇನ್ನೂ ಕೆಲವರು ತೆಗಳುತ್ತಾರೆ.ಅವನ ಆ ಸಾಧನೆ ಹಿಂದೆ ಎಷ್ಟು ಕಷ್ಟಪಟ್ಟಿ ಆ ಹಂತಕ್ಕೆ ಬಂದಿದ್ದಾನೆಂಬುದು ನಮಗೆ ತಿಳಿಯುವುದಿಲ್ಲ.ಆತನಿಗೆ ಮಾತ್ರ ತಿಳಿದಿರುತ್ತದೆ. ಸಾವಿರಾರು ಮೆಟ್ಟಿಲುಗಳನ್ನು ದಾಟಿ ಯಶಸ್ಸು ಎಂಬ ಸಿಂಹಾಸನವನ್ನುನಾವು ಅಲಂಕರಿಸಬೇಕು.ಆ ಸಾವಿರಾರು ಮೆಟ್ಟಿಲುಗಳನ್ನು ದಾಟುವಾಗ ಸೋಲು ಗೆಲುವುಗಳು ಅನಿವಾರ್ಯ. ಜೀವನದಲ್ಲಿ ಗುರಿಯತ್ತ ಹೋಗುವಾಗ ಸೋಲೇ ಆಗಲಿ ಗೆಲುವೇ ಆಗಲಿ ಎರಡನ್ನೂ ಸ್ವೀಕರಿಸಿ  ಮುನ್ನಡೆಯಬೇಕು. ಸೋಲೇ ಗೆಲುವಿನ ಸೋಪಾನ ಎಂಬ ಗಾದೆ ಮಾತಿನ ಪ್ರಕಾರ ಸೋಲು ಎಂಬುದು ನಮ್ಮ ಮುಂದಿನ ಪ್ರತಿ ಹೆಜ್ಜೆಯ ಗುರಿಯ ಮೆಟ್ಟಿಲಾಗಿರುತ್ತದೆ.ಇವುಗಳು  ಒಂದು ನಾಣ್ಯದ ಎರಡು  ಮುಖಗಳಿದ್ದಂತೆ. ಈಗ ಒಂದು ಬಾರಿ ಸೋತರೆ ಪುನಃ ನಾಳೆಯೂ ಪ್ರಯತ್ನ ಪಟ್ಟಣ ಮತ್ತೇ ಸೋಲಾಗುತ್ತದೆಂಬುದು ನಮ್ಮ  ಭ್ರಮೆ. ಏನೇ ಆಗಲಿ ಕೈಗೆ ಎಟಕುವ ತನಕ ಬಿಡಬಾರದು ಪುನಃ ಪುನಃ ಪ್ರಯತ್ನಿಸಬೇಕು.



     ಯಾರೇ ಆಗಲಿ ಒಂದು ಗುರಿಯನ್ನು ಸಾಧಿಸಲು ಗುರುಗಳ ಮಾರ್ಗದರ್ಶನ ಅತ್ಯವಶ್ಯ. ಮಾರ್ಗದರ್ಶನವಿಲ್ಲದೇ ಏನೂ ಸಾಧಿಸಲು ಸಾಧ್ಯವಿಲ್ಲ.  ಪ್ರತಿದಿನ,ಪ್ರತಿನಿಮಿಷ ಕೂಡ ನಾವು ಬೇರೆಯವರಿಂದ ಪಾಠವನ್ನು ಕಲಿತಿರುತ್ತೇವೆ.ಉದಾಹರಣೆಗೆ ಒಂದು ಮನೆಯನ್ನು ಕಟ್ಟುವಾಗ ಅದಕ್ಕೆ ಅಡಿಪಾಯ ಮುಖ್ಯವಾಗಿರುತ್ತದೆ.ಅಡಿಪಾಯ ಗಟ್ಟಿ ಇದ್ದಷ್ಟು ಮನೆ ಹಲವಾರು ವರ್ಷಗಳ ಕಾಲ ಬಾಳಿಕೆ ಬರುತ್ತದೆ.ಹಾಗೆಯೇ ಕೂಡ ನಮ್ಮ ಗುರಿಯನ್ನು ತಲುಪಲು ಗುರುಗಳ ಮಾರ್ಗದರ್ಶನ ಮುಖ್ಯವಾಗಿದೆ. ಗುರುಗಳು ಕಳಿಸಿದ ನೀತಿಪಾಠ, ಶಿಕ್ಷಣ ನಮಗೆ ಉತ್ತಮವಾದ  ಜ್ಞಾನ, ಕೌಶಲ್ಯವನ್ನು ನೀಡುತ್ತದೆ. ಈ ಕಲಿಯುಗದಲ್ಲಿ ಸ್ವಾರ್ಥವಿಲ್ಲದೆ ಮಾರ್ಗದರ್ಶನ ನೀಡುವ ಎರಡೇ ಎರಡು ಜೀವಿಗಳೆಂದರೆ ಒಂದು ಗುರುಗಳು ಇನ್ನೊಂದು ತಂದೆ ತಾಯಿಗಳು. ಜೀವನದಲ್ಲಿ ಮುಂದೆ ಗುರಿ ಇರಬೇಕು ಹಾಗೂ ಹಿಂದೆ ಗುರು ಇರಬೇಕು . ಯಾರಿಂದಲೂ ಅಪಹರಿಸಲಾಗದ ವಿದ್ಯೆಯನ್ನು ಧಾರೆ ಎರೆದು ನಮ್ಮ ಯಶಸ್ಸಿಗಾಗಿ  ಕಾಯುತ್ತಿರುವವರು ಗುರುಗಳಾಗಿರುತ್ತಾರೆ.

                          

              ಅರ್ಪಿತಾ ಮರಾಠಿ

               ಎಂ. ಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯ ಸಿರ್ಸಿ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಅಡಕೆ ಬೀಳದಿರಲಿ ಕೆಳಕ್ಕೆ

ಪ್ರಕೃತಿಯ ಮಡಿಲಿನಲ್ಲೊಂದು ಸುಂದರ ತಾಣ ಮತ್ತಿಘಟ್ಟ