ಪರಿಸರದ ಮೇಲೆ ಮಾನವನ ದೌರ್ಜನ್ಯ


ನಾವು ವಾಸಿಸುತ್ತಿರುವ ಸುತ್ತಮುತ್ತಲಿನ ವಾತಾವರಣವೇ ನಮ್ಮ ಪರಿಸರ. ಇದು ಮಾನವನ ಸಾಮಾಜಿಕ, ಮಾನಸಿಕ, ದೈಹಿಕ ಬೆಳವಣಿಗೆಗಳ ಮೇಲೆ ಪರಿಣಾಮ ಬೀರುತ್ತದೆ. ಪರಿಸರವಿಲ್ಲದೆ ನಮ್ಮ ಅಸ್ತಿತ್ವಕ್ಕೆ ಯಾವುದೇ ಬೆಲೆಯಿಲ್ಲ. ಇಂದೂ ಕೂಡ ಪ್ರತಿಯೊಬ್ಬರೂ ಪರಿಸರದ ಬಗ್ಗೆ ಅರಿಯುವ ಅಗತ್ಯವಿದೆ.

             ಸುತ್ತಮುತ್ತಲೂ ವೈವಿಧ್ಯಮಯವಾದ

ನಿಸರ್ಗದ ಸೊಬಗಿದೆ. ಹಲವಾರು ಗಿಡ ಮರಗಳಿವೆ. ವಿವಿಧ ಪ್ರಕಾರದ ಪ್ರಾಣಿ ಪಕ್ಷಿಗಳಿಗೆ. ಅನೇಕ ಸೂಕ್ಷ್ಮಜೀವಿಗಳಿವೆ. ಗುಡ್ಡ,ಬೆಟ್ಟ, ದೊಡ್ಡ ದೊಡ್ಡ ಪರ್ವತ ಶಿಖರಗಳು ಇದೆ. ಆದರೆ ವಿಜ್ಞಾನ,ತಂತ್ರಜ್ಞಾನ, ಅಭಿವೃದ್ಧಿ, ಆಧುನಿಕತೆ, ನಗರೀಕರಣ, ಕೈಗಾರೀಕರಣ ಎಂಬ ಹಲವು ಕಾರಣಗಳಿಗಾಗಿ ಅನೇಕ ರೀತಿಯಲ್ಲಿ ಅರಿತೋ ಅರಿಯದೆಯೋ ಪರಿಸರಕ್ಕೆ ತೀವ್ರ ಹಾನಿಯನ್ನುಂಟು ಮಾಡುತ್ತಿದ್ದೇವೆ.

                 ಇತ್ತೀಚೆಗಂತೂ ವಿಸ್ತರಣೆ ಹೊಂದುತ್ತಿರುವ ರೈಲು ಮಾರ್ಗ, ವಾಹನಗಳಿಗಾಗಿ ರಚನೆಯಾಗುತ್ತಿರುವ ರಸ್ತೆಗಳು,ದೊಡ್ಡ ದೊಡ್ಡ ಕಟ್ಟಡಗಳಿಗಾಗಿ ನಿರಂತರವಾಗಿ ಕಡಿಯುತ್ತಿರುವ ಮರಗಳು,ಇತ್ಯಾದಿಗಳಿಂದ ಮಾಲಿನ್ಯಗಳು ಹೆಚ್ಚಾಗುತ್ತಿದ್ದು ಹವಾಮಾನ ವೈಪರಿತ್ಯ ಉಂಟಾಗುತ್ತಿದೆ. ಅಲ್ಲದೆ ಹೆಚ್ಚುತ್ತಿರುವ ಜನಸಂಖ್ಯೆ, ಹೊಗೆ ಬರುವ ವಾಹನ, ವಾಹನಗಳ ಸಂದಣಿ, ಪ್ಲಾಸ್ಟಿಕ್ ಇತ್ಯಾದಿಗಳಿಂದ ನಮ್ಮ ಪರಿಸರ ಹಾಳಾಗುತ್ತಿದೆ.

                     ನಾವು ನಮ್ಮ ಸ್ವಾರ್ಥಕ್ಕಾಗಿ ಮರ ಗಿಡಗಳನ್ನು ಕಡಿದು ಹಾಕುತ್ತಿದ್ದೇವೆ. ಇದರಿಂದಾಗಿ ಹಸಿರು ಎಂಬುದು ಎಲ್ಲಿಯೂ ಕಾಣ ಸಿಗುವುದಿಲ್ಲ. ಮನುಷ್ಯನ ಅತಿ ಆಸೆ, ಏರುತ್ತಿರುವ ಜನಸಂಖ್ಯೆ ಜೀವನದ ಬಯಕೆಗಳು ಪರಿಸರವನ್ನು ಹಾಳು ಮಾಡುತ್ತಿದೆ. ನಮ್ಮ ಸುತ್ತಮುತ್ತಲಿನ ನೀರು, ಗಾಳಿ ಎಲ್ಲವೂ ಕಲುಷಿತಗೊಳ್ಳುತ್ತಿದೆ. ಪರಿಸರ ಪ್ರೇಮಿಗಳು, ಸರ್ಕಾರಗಳು ಕಾಲದಿಂದ ಕಾಲಕ್ಕೆ ಅನೇಕ ಕ್ರಮಗಳನ್ನು ಕೈಗೊಂಡು ಪರಿಸರವನ್ನು ಮಾಲಿನ್ಯದಿಂದ ರಕ್ಷಿಸುವ ಪ್ರಯತ್ನ ಮಾಡುತ್ತಲೇ ಬಂದಿದೆ. ಇಂದು ಕೇವಲ ಮನುಕುಲಕ್ಕಷ್ಟೇ ಅಲ್ಲದೆ ಇಡೀ ವಿಶ್ವದ ಜೀವ ಸಂಕುಲಕ್ಕೆ ಮರಕವಾಗುತ್ತಲೇ ಇದೆ. ಆರೋಗ್ಯಕರ ಜೀವನಕ್ಕೆ ಅತೀ ಅಗತ್ಯವಾದ ಗಾಳಿ, ನೀರು, ಆಹಾರ ವಿಷಪೂರಿತವಾಗುತ್ತಿದೆ.

                    ಕೈಗಾರಿಕೆಗಳು ಮತ್ತು ವಾಹನಗಳು ಹೊರಸೂಸುವ ವಿಷಾನಿಲಗಳು ಗಾಳಿಯನ್ನು ಕಲುಷಿತಗೊಳಿಸುತ್ತಿದೆ. ಅಲ್ಲದೆ ಕೃಷಿ,ರಸ್ತೆ,ಜನವಸತಿಯಂತಹ ಯೋಜನೆಗಳಿಂದಾಗಿ ಅರಣ್ಯ ನಾಶವಾಗುತ್ತಿದೆ. ಪರಿಸರ ಮಾಲಿನ್ಯವು ಮನುಷ್ಯನ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. 

                 ಈ ಜೈವಿಕ ವೈವಿಧ್ಯತೆ ಕಾಪಾಡುವುದು ನಮ್ಮ ಕರ್ತವ್ಯ. ವಿಷಪೂರಿತ ವಸ್ತುಗಳು ಮತ್ತು ತ್ಯಾಜ್ಯಗಳದ ಪ್ಲಾಸ್ಟಿಕ್ ಇತ್ಯಾದಿಗಳ ಅನಧಿಕೃತ ಮಾರಾಟ ತಡೆಗಟ್ಟಬೇಕು. ಪರಿಸರ ತತ್ವಗಳ ಚೌಕಟ್ಟಿಗೆ ಹೊಂದಿಸಿ ಬಳಸುವುದರ ಮಹತ್ವವನ್ನು ಸಾಮಾನ್ಯ ನಾಗರಿಕರು ಅರಿಯಬೇಕು. ಪರಿಸರದ ಬಗ್ಗೆ ಮಕ್ಕಳಿಗೆ ಶಿಕ್ಷಣ ನೀಡಬೇಕು. ಮಕ್ಕಳಲ್ಲಿ ಪರಿಸರ ಪ್ರೇಮ ಮತ್ತು ಪರಿಸರ ನಾಶದಿಂದಾಗುವ ದುಷ್ಪರಿಣಾಮಗಳ ಕುರಿತು ತಿಳಿಸುವ ಕೆಲಸ ಮಾಡಬೇಕು. ಅದರಿಂದ ಮುಂದಿನ ದಿನಗಳಲ್ಲಿ ಉತ್ತಮ ಫಲಿತಾಂಶ ಸಿಗುತ್ತದೆ. ಪಠ್ಯ ಪುಸ್ತಕದಲ್ಲಿ ಪರಿಸರದ ಸಂರಕ್ಷಣೆ ಬಗ್ಗೆ ಒತ್ತು ನೀಡಬೇಕು. ಮನೆಯ ಆವರಣ ಮತ್ತು ಸುತ್ತಲಿನ ಸ್ಥಳಗಳಲ್ಲಿ ಗಿಡಗಳನ್ನು ನೆಡಬೇಕು. ಏಕೆಂದರೆ ಪರಿಸರ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ. ಪರಿಸರವಿಲ್ಲದೆ ಮಾನವನಿಲ್ಲ ಎಂಬ ಸತ್ಯವನ್ನು ನಾವಿಂದು ನಮ್ಮ ಜೀವನದ ಗುರಿಯನ್ನಾಗಿಸಿಕೊಂಡು ಪರಿಸರ ಸಂರಕ್ಷಣೆಯತ್ತ ಹೆಜ್ಜೆ ಹಾಕಬೇಕು. 

                                                       ವೇದಾ ಭಟ್

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಅಳಿವಿನಂಚಿನಲ್ಲಿರುವ ಕಗ್ಗ

ಪ್ರಕೃತಿಯ ಮಡಿಲಿನಲ್ಲೊಂದು ಸುಂದರ ತಾಣ ಮತ್ತಿಘಟ್ಟ

ನಮ್ಮ ಅರಳೇಶ್ವರ