ನನ್ನ ಕನಸಿನ ಭಾರತದ ಹಳ್ಳಿಗಳು

"ಹಳ್ಳಿಗಳು ಪಟ್ಟಣಿಗರ ಅನ್ನ ನೀಡುವ ಬಟ್ಟಲು "ಎಂಬ ಮಾತಿದೆ. ಭಾರತದ ಅಭಿವೃದ್ಧಿಯ ತಳಪಾಯವೇ ಹಳ್ಳಿಗಳು. ಪ್ರಾಚೀನ ಕಾಲದಿಂದ ತನ್ನ ಸಂಸ್ಕೃತಿ,  ಸಂಪ್ರದಾಯ, ಆಚಾರ ವಿಚಾರ ಪಾರಂಪರಿಕ ವೈದ್ಯ ಪದ್ಧತಿ ಹಾಗೂ ವಿಶಿಷ್ಟ ಜೀವನಶೈಲಿಯಲ್ಲಿ ಜೀವಂತಿಕೆಯನ್ನು ಉಳಿಸಿಕೊಂಡು ಬಂದಂತಹ ಅಪಾರ ವಿಶೇಷತೆ ನಮ್ಮ ಹಳ್ಳಿಗಳದ್ದು.ಹಳ್ಳಿಗಳಲ್ಲಿ ಕಾಣುವ ಸಂಸ್ಕಾರ, ನೈತಿಕತೆಯ ಮೌಲ್ಯಗಳು, ಆಚರಣೆಗಳು,ಹಳ್ಳಿ ಮಣ್ಣಿನ ಮೇಲೆ ಅಲ್ಲಿನ ಜನರಿಗಿರುವ  ಅಕ್ಕರೆ ಪದಗಳಲ್ಲಿ ಹಿಡಿದಿಡಲು ಅಸಾಧ್ಯ. ಅನ್ನ ನೀಡುವ ಭೂಮಿಯನ್ನು ಸಾಕ್ಷಾತ್ ದೈವವೆಂದು ಪೂಜಿಸುವ ಮನಸು ನಮ್ಮ ಹಳ್ಳಿಗರದ್ದು. ಇಲ್ಲಿನ ಅನೇಕ ಜಾನಪದ ಸಾಂಪ್ರದಾಯಿಕ ಶೈಲಿಗಳು ವಿದೇಶದಲ್ಲಿಯು ಮನ್ನಣೆ ಪಡೆದಿದೆ.

              ಭಾರತದ ಹಳ್ಳಿಗಳಲ್ಲಿರುವ ಅತ್ಯದ್ಭುತ ವಿಶೇಷತೆಗಳು ಇರಲು ಸಾಧ್ಯವಿಲ್ಲ. ಆಧುನಿಕರಣದತ್ತ ಮುಖ ಮಾಡುತ್ತಿರುವ ನಮ್ಮ ಸಮಾಜದ ಮನಸ್ಸಿನಲ್ಲಿ ಹಳ್ಳಿಗಳೆಂದರೆ ವಿಚಿತ್ರ ತಾತ್ಸಾರ ಮನೋಭಾವ ಎದ್ದು ಕಾಣುತ್ತಿದೆ. ಹಳ್ಳಿಗಳೆಂದರೆ ಕೇವಲ ಅನಾಗರಿಕರ ತಾಣವೆಂದು ಮೂಗು ಮುರಿಯುವರು ಸಹ ಇದ್ದಾರೆ. ಹಳ್ಳಿಗಳಲ್ಲಿನ ಭೂಮಿಗಳನ್ನು ಕೈಗಾರಿಕೆಗೆ ಬಳಸಿಕೊಂಡರೆ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂಬ ನಿಲುವನ್ನು ವಾದಿಸುವವರು ಸಹ ಇದ್ದಾರೆ. ಆದರೆ ದೇಶ ಅಭಿವೃದ್ಧಿ ಹೊಂದಬೇಕೆಂದರೆ ಹಳ್ಳಿಗಳ ಅಭಿವೃದ್ಧಿಯಿಂದ ಸಾಧ್ಯವೇ ಹೊರತು ಕೈಗಾರಿಕೆಗಳಿಂದ ಪರಿವರ್ತನೆ ಹೊಂದಿ ನಶಿಸಿ ಹೋದ ಹಳ್ಳಿಗಳ ಹೆಸರಿನಿಂದಲ್ಲ.

                    ಭಾರತದ ಹಳ್ಳಿಗಳು ಎಂದಿಗೂ ಅನಾಗರಿಕವಲ್ಲ. ಪುರಾತನ ಕಾಲದಿಂದ ತಮ್ಮದೇ ಆದ ರೀತಿಯಲ್ಲಿ ಶೈಕ್ಷಣಿಕ ಸಾಂಸ್ಕೃತಿಕ, ವೈದ್ಯಕೀಯ ಕ್ಷೇತ್ರದಲ್ಲಿ ಮುನ್ನಡೆದುಕೊಂಡು ಬಂದ ಹಳ್ಳಿಗರ ಆಲೋಚನ ಶಕ್ತಿಯು ನಮ್ಮ ಕಲ್ಪನೆಗೂ ಮೀರಿದ್ದು. ಇಲ್ಲಿನ ಪ್ರತಿ ಆಚರಣೆಯ ಹಿಂದೆ ಒಂದೊಂದು ತತ್ವವಿದೆ. ಪ್ರತಿ ಹಬ್ಬಗಳ ಹಿಂದೆಯೂ ಒಂದು ಆಶಾ ಭಾವನೆ ಇದೆ. ಹಳ್ಳಿ ಹಬ್ಬಗಳ ಆಚರಣೆಯ ಹಿಂದಿರುವ ಅದೆಷ್ಟೋ ಸಂಪ್ರದಾಯಗಳಿಗೆ ಆಧುನಿಕ ಕಾಲದ ವೈಜ್ಞಾನಿಕ ಪದ್ಧತಿಯೇ  ತಲೆದೂಗಿ ಬಿಟ್ಟಿದೆ. ಪ್ರಪಂಚದ ಯಾವುದೇ ಮೂಲೆಯಲ್ಲಿಯೂ ಗುಣವಾಗದ ಕಾಯಿಲೆ ಹಳ್ಳಿ ಮದ್ದಿನಿಂದ ಗುಣವಾದ ದಾಖಲೆಗಳು ಇವೆ. ಇಂತಹ ಹಳ್ಳಿಗಳನ್ನು ಅನಾಗರಿಕತೆಯ ತೊಟ್ಟಿಲು ಎನ್ನುವ ಅನೇಕರು ಶತ ಮೂರ್ಖರೇ ಸರಿ.

                     ಭಾರತ ಅಭಿವೃದ್ಧಿಯಾಗಬೇಕೆಂದರೆ ಖಂಡಿತವಾಗಿಯೂ ಹಳ್ಳಿಗಳ ಅಭಿವೃದ್ಧಿ ಮುಖ್ಯ. ಆದರೆ ಅಭಿವೃದ್ಧಿ ಕಾರ್ಯಗಳು ಹಳ್ಳಿಯ ಜೀವನ ಶೈಲಿಗೆ ಹಳ್ಳಿಗರ ಭಾವನೆಗಳಿಗೆ ಪೆಟ್ಟು ಕೊಡುವ ರೀತಿ ಇರಬಾರದು. ಕೃಷಿಯನ್ನೇ ನಂಬಿ ಬದುಕುತ್ತಿರುವ ಹಳ್ಳಿಗರಿಗೆ ಇಂದಿಗೂ ಹಸಿರ ಪ್ರಕೃತಿಯೇ  ಜೀವನಾಡಿ. ದೇಶದ ಜನರ ಹೊಟ್ಟೆ ತುಂಬಬೇಕಾದರೆ ಪ್ರತಿ ರೈತರು ಬೆವರ ಸುರಿಸಿ ದುಡಿಯಲೇಬೇಕು. "ಅನ್ನದಾತೋ ಸುಖಿಭವ" ಎಂಬುದು ನಮ್ಮ ಮೂಲ ಮಂತ್ರವಾಗಬೇಕು. ಕೃಷಿ ಕ್ಷೇತ್ರದ ಪ್ರತಿ ಸೂಕ್ಷ್ಮತೆಯ ಬಗ್ಗೆ ಪ್ರತಿ ರೈತರಿಗೂ ತಿಳುವಳಿಕೆ ಮೂಡಿಸಿ,  ಕೃಷಿ ಕ್ಷೇತ್ರದಲ್ಲಿ ತಂತ್ರಜ್ಞಾನಗಳ ಪ್ರಗತಿಯನ್ನು ಮಾಡಬೇಕು. ಸಾಲದ ಹೆಸರಿನಲ್ಲಿ ರೈತರ ಮಾರಣಹೋಮ ನಡೆಯಲು ಬಿಡದೆ, ಸರ್ಕಾರವೇ ಮುಂದೆ  ನಿಂತು ರೈತರ ಕಷ್ಟಗಳನ್ನು ಪರಿಹರಿಸಬೇಕು.

              ಕೈಗಾರಿಕೆಗಳಿಂದ ಹಳ್ಳಿಗಳ ಮೇಲೆ ಆಗುವ ಅನುಕೂಲತೆಗಳಿಗಿಂತ ಅನಾನುಕೂಲಗಳೆ ಜಾಸ್ತಿ. ಮಾಲಿನ್ಯದ ಹೆಸರಿನಲ್ಲಿ ಹಳ್ಳಿಗಳ ಸ್ವಚ್ಛ ವಾತಾವರಣವನ್ನು ಕಸಿಯುವ ಕೆಲಸ ಅದೆಷ್ಟೋ ಕೈಗಾರಿಕೆಗಳಿಂದ ಆಗುತ್ತಿದೆ. ಇದನ್ನು ಮುಂದುವರಿಯಲು ಬಿಡದೆ ಹಳ್ಳಿಯ ಮೂಲ ವಾತಾವರಣವನ್ನು ಹಳ್ಳಿಗಳಿಗೆ ಮರಳಿಸಿಕೊಡಬೇಕು. ನಗರ ಜೀವನದ ಶೈಲಿಗೆ ಹೊಂದಿಕೊಳ್ಳಲಿಲ್ಲವೆಂದ ಮಾತ್ರಕ್ಕೆ ಹಳ್ಳಿಗರು ದಡ್ಡರಲ್ಲ. ಹಳ್ಳಿಗರಿಗೆ ಇರುವ ಜ್ಞಾನದ ಜೊತೆ ಒಳ್ಳೆಯ ಶಿಕ್ಷಣವನ್ನು ಜನರಿಗೆ ನೀಡಬೇಕು.

                     ಸಾವಿರಾರು ವರ್ಷಗಳು ಕಳೆದರೂ,ಅನೇಕ ಜನಪದ ಕಲೆಗಳು,  ಸಂಸ್ಕೃತಿಗಳು,  ಆಚಾರ-ವಿಚಾರಗಳು ಇಂದಿಗೂ ಹಳ್ಳಿಗಳಲ್ಲಿ ಜೀವಂತವಾಗಿದೆ. ಅದನ್ನು ದೇಶದ ಪ್ರತಿಯೊಬ್ಬರಿಗೂ ಪರಿಚಯಿಸಬೇಕು. ನಗರ ಪ್ರದೇಶದ ಶಾಲೆಗಳಲ್ಲೂ ಹಳ್ಳಿಯ ಮಹತ್ವವನ್ನು ಮಕ್ಕಳಿಗೆ ಅರಿವು ಮಾಡಿಸಬೇಕು. ಹಳ್ಳಿಯ ಆಚರಣೆ ಪದ್ಧತಿಯನ್ನು ನಗರದ ಜನರಿಗೆ ಅರ್ಥ ಮಾಡಿಸುವ ಮೂಲಕ ಹಳ್ಳಿಗಳ ಮೇಲೆ ಜನರಿಗೆ ಇರುವ ಕೀಳರಿಮೆಯನ್ನು ತೊಲಗಿಸಬೇಕು. ಸರ್ಕಾರವು ಹಳ್ಳಿ ಮತ್ತು ನಗರದ ನಡುವಿನ ಸೇತುವೆಯಾಗಿ ಕಾರ್ಯನಿರ್ವಹಿಸಬೇಕು.

                    ಹಳ್ಳಿಯಲ್ಲಿ ವಿಶಿಷ್ಟ ಪದ್ಧತಿಗಳಿಗೆ ಕಲೆ,  ಕೌಶಲ್ಯಗಳಿಗೆ ರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಸಿಗುವಂತೆ ಮಾಡಬೇಕು. ಹಳ್ಳಿಯ ಪ್ರತಿಭೆಗಳನ್ನು ಪ್ರೋತ್ಸಾಹಿಸಬೇಕು. ಭಾರತದ ಮೂಲಗಳೆ ಹಳ್ಳಿಗಳು. ಭಾರತ ತನ್ನ ಮೂಲವನ್ನು,  ಮೂಲದ ಆಚರಣೆಗಳನ್ನು ಪ್ರಪಂಚಕ್ಕೆ ಪರಿಚಯಿಸಿ ಭಾರತದ  ಹಳ್ಳಿಗಳನ್ನು ವಿದೇಶಿಗರ ಆಕರ್ಷಣೆಯ ಕೇಂದ್ರವಾಗಿಸಲು ಪ್ರಯತ್ನಿಸಬೇಕು. ಹಳ್ಳಿಗಳಿಗೆ ಹಳ್ಳಿಗರ ರೀತಿಯಲ್ಲಿಯೇ ಹೋಗಿ ಅಭಿವೃದ್ಧಿ ಕಾರ್ಯಗಳ ಮನದಟ್ಟು ಮಾಡಬೇಕು. ಹಳ್ಳಿಗರ ಭಾವನೆಗಳಿಗೆ,  ಸಂಪ್ರದಾಯ,  ಆಚರಣೆಗಳಿಗೆ ನೋವಾಗದ ರೀತಿ ಸರ್ಕಾರದ ಅಭಿವೃದ್ಧಿ ಕಾರ್ಯಗಳು ಜರುಗಿದರೆ ಭಾರತ ತನ್ನ ಮೂಲ ಸ್ವರೂಪದಲ್ಲಿಯೇ ಅಭಿವೃದ್ಧಿ ಹೊಂದಿದ ನವ ಭಾರತವಾಗಿ ನಿರ್ಮಾಣವಾಗಬಲ್ಲದು. ಇದಕ್ಕೆ ಸಮಾಜ ಹಾಗೂ ಸರ್ಕಾರ ಒಮ್ಮತದಲ್ಲಿ ಕೈ ಜೋಡಿಸಬೇಕು.                 

                                                         ಶಿಲ್ಪಾ ಪೂಜಾರಿ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ನಮ್ಮ ಅರಳೇಶ್ವರ

ನೋಡ ಬಾ ನಮ್ಮೂರ ಸಸ್ಯಲೋಕ "

ಡಮಾಮಿ