ಪ್ರಕೃತಿಯ ಮಡಿಲಿನಲ್ಲೊಂದು ಸುಂದರ ತಾಣ ಮತ್ತಿಘಟ್ಟ
ಮಲೆನಾಡಿನಲ್ಲಿ ಹುಟ್ಟುವುದೇ ಒಂದು ಅದೃಷ್ಟ. ಪ್ರಕೃತಿಯ ನಡುವಿನ ಸೊಬಗಿನ ತಾಣ ಶಿರಸಿ. ಶಿರಸಿಯಲ್ಲೊಂದು ಸುಂದರವಾದ ಪುಟ್ಟದಾದ ಊರು ಮತ್ತಿಘಟ್ಟ . ಇಲ್ಲಿನ ಹಸಿರಿನಿಂದ ಕಂಗೊಳಿಸುವ ಪ್ರಕೃತಿ, ಪ್ರಶಾಂತ ವಾತಾವರಣ, ತಂಪಾಗಿ ಬೀಸುವ ತಂಗಾಳಿ, ಚಿಲಿಪಿಲಿಗುಡುತ್ತಿರುವ ಹಕ್ಕಿಗಳ ಕಲರವ, ಕಾಡುಪ್ರಾಣಿಗಳು ಹಾಗೂ ಔಷಧೀಯ ಗುಣವಿರುವ ಗಿಡಗಳು, ಅಲ್ಲಲ್ಲಿ ಸಣ್ಣ ಸಣ್ಣದಾಗಿ ಹರಿಯುವ ಹೊಳೆಗಳು, ಇವೆಲ್ಲವೂ ನೋಡಲು ಬಲು ಸುಂದರ.
ಆ ದಟ್ಟವಾದ ಕಾಡಿನಲ್ಲಿ ದೂರ ದೂರದಲ್ಲಿ ಒಂದೊಂದು ಮನೆಗಳು, ಯಾವ ಗಲಾಟೆ ಗದ್ದಲಗಳಿಲ್ಲದೆ ವಾಸಿಸುತ್ತಿರುವ ಜನರು, ಮನೆಯ ಸುತ್ತಮುತ್ತ ಇರುವ ಅಡಿಕೆ ಮರಗಳು, ತೆಂಗಿನ ಮರಗಳನ್ನು ನೋಡುವುದೇ ಆನಂದ . ಮನೆಯ ಮುಂದಿರುವ ಹೊಳೆ , ಆ ಹೊಳೆಯ ನೀರು ಹರಿಯುವ ಜುಳು ಜುಳು ಸದ್ದು ಅದನ್ನು ಕೇಳಿಸಿಕೊಳ್ಳುವುದೇ ಒಂದು ಅದ್ಭುತ.
ಇನ್ನು ಮಳೆಗಾಲದಲ್ಲಂತೂ ಬಲು ಸೊಗಸಾದ ಊರು ನಮ್ಮೂರು, ತುಂಬಿ ಹರಿಯುವ ಹೊಳೆ, ಅಚ್ಛಹಸಿರಿನಿಂದ ಕೂಡಿರುವ ಪ್ರಕೃತಿ. ನಮ್ಮ ಊರು ಎಷ್ಟು ಸುಂದರವಾಗಿದೆಯೋ ಅಷ್ಟೇ ಕಷ್ಟಕರವಾಗಿ ತೊಂದರೆಗಳಿಂದ ಕೂಡಿದೆ. ಇನ್ನೂ ಸರಿಯಾಗಿ ಅಭಿವೃದ್ಧಿ ಹೊಂದದ ರಸ್ತೆ. ಮಳೆಗಾಲದಲ್ಲಂತೂ ತಿಂಗಳುಗಟ್ಟಲೆ ವಿದ್ಯುತ್ #ಕಣ್ಣಾಮುಚ್ಚಾಲೆ. ಕಾರಣ ಕರೆಂಟ್ ಕಂಬಗಳ ಮೇಲೆ ಬೀಳುವ ಮರಗಳು, ನೆಟ್ವರ್ಕ್ ಇರುವುದಿಲ್ಲ. ನೆಟ್ವರ್ಕ್ ಇಲ್ಲದ ಜೀವನ ಸುಂದರವೇ ಇರಬಹುದು, ಆದರೆ ಎಲ್ಲಾ ಸಮಯದಲ್ಲಿಯೂ ನೆಟ್ವರ್ಕ್ ಇಲ್ಲದ ಜೀವನ ಸುಂದರವಾಗಿರುವುದಿಲ್ಲ, ಇಲ್ಲಿ ಯಾರಿಗಾದರೂ ಏನಾದರೂ ಆದರೆ, ಏನಾದರೂ ಬೇಕಾದರೆ ಬೇರೆಯವರನ್ನು ಸಂಪರ್ಕಿಸಬೇಕಾದರೆ ನೆಟ್ವರ್ಕ್ ಗಾಗಿ ಬೆಟ್ಟದ ತುದಿಗೆ ಹೋಗಬೇಕು. ಇನ್ನು ರಸ್ತೆಯ ಪರಿಸ್ಥಿತಿ ಅಂತೂ ಹೇಳತೀರದು.
ಯಾವ ವಾಹನಗಳೂ ಓಡಾಡುವ ಪರಿಸ್ಥಿತಿ ಇರುವುದಿಲ್ಲ. ವಾಹನಗಳೇ ಆಗಲಿ, ನಾವು ಮನುಷ್ಯರೇ ಆಗಲಿ ಓಡಾಡುವುದು ಬಹಳ ಕಷ್ಟ. ಇನ್ನು ರಾತ್ರಿ ಮಲಗಿದರೆ ಭಯದಿಂದ ನಿದ್ದೆಯೂ ಸಹ ಬರುವುದಿಲ್ಲ ಕಾರಣ, ಗುಡ್ಡ ಕುಸಿತ ಇಲ್ಲಿ ಹೆಚ್ಚಾಗಿ ಮನೆಗಳು ಬೆಟ್ಟದ ಮೇಲೆ ಇವೆ . ಯಾವಾಗ ಎಲ್ಲಿ ಗುಡ್ಡ ಕುಸಿಯುತ್ತದೆ ಎಂದು ಹೇಳಲು ಸಾಧ್ಯವಿಲ್ಲ.ಭಯದಲ್ಲೇ ಬದುಕಬೇಕಾದ ಸ್ಥಿತಿ ಇಲ್ಲಿನ ಜನರದ್ದು. ಹೊರಗಿನ ಜನರಿಗೆ ಇಲ್ಲಿಯ ವಾತಾವರಣ ಇಷ್ಟವಾಗುತ್ತದೆ ಆದರೆ, ಇಲ್ಲಿ ಜೀವನ ನಡೆಸುತ್ತಿರುವವರಿಗೆ ಮಾತ್ರ ಇಲ್ಲಿಯ ಕಷ್ಟದ ಜೀವನ ತಿಳಿದಿದೆ.
ಈ ಊರಿನ ಪರಿಸ್ಥಿತಿ ಸ್ವಲ್ಪ ಕಷ್ಟಕರವಾಗಿದ್ದರೂ ಇಲ್ಲಿ ಹುಟ್ಟಿ ಬೆಳೆಯಲು ಪುಣ್ಯ ಮಾಡಿರಬೇಕು. ಪ್ರಕೃತಿಯ ಮಧ್ಯೆ ಯಾರ ತೊಂದರೆ ಇಲ್ಲದೆ ಬದುಕುವ ಅವಕಾಶ ಎಷ್ಟು ಜನರಿಗೆ ದೊರೆಯುತ್ತದೆ ? ಮನೋಹರವಾದ ಪ್ರಕೃತಿ ಸೌಂದರ್ಯ ನಮ್ಮೂರಿನಲ್ಲಿದೆ. ಇಲ್ಲಿಯ ಶಂಭುಲಿಂಗ ದೇವಸ್ಥಾನವು ಹೊಳೆಯ ತೀರದಲ್ಲಿರುವುದರಿಂದ ಪ್ರತಿ ವರ್ಷವೂ ಮಳೆಗಾಲದಲ್ಲಿ ನೀರು ದೇವರ ಗರ್ಭಗುಡಿಯವರೆಗೆ ಪ್ರವೇಶಿಸುತ್ತದೆ. ಇದನ್ನು ನೋಡುವುದೇ ಬಲು ಸುಂದರ.
ಇನ್ನು ನಮ್ಮೂರಿನಲ್ಲಿ ಮತ್ತಿಘಟ್ಟ ಜಲಪಾತವಿದೆ. ಇದು ಹಸೇಹಳ್ಳ ಎಂಬ ಹೊಳೆಯಿಂದ ಜಲಧಾರೆಯಾಗಿ ರೂಪುಗೊಂಡಿದೆ. ಈ ಜಲಪಾತವನ್ನು ಹಸೇಹಳ್ಳ ಜಲಪಾತ ಎಂದೂ ಸಹ ಕರೆಯುತ್ತಾರೆ. ಆದರೆ ಈ ಜಲಪಾತವು ಅಷ್ಟೊಂದು ಪ್ರಸಿದ್ಧಿ ಹೊಂದಿರಲಿಲ್ಲ. ಇವಾಗ ಸೋಶಿಯಲ್ ಮೀಡಿಯಾದ ಪ್ರಭಾವದಿಂದ ಪ್ರಸಿದ್ಧಿಯಾಗತೊಡಗಿದೆ. ಈ ಜಲಪಾತವನ್ನು ವೀಕ್ಷಿಸಲು ಬೇರೆ ಬೇರೆ ಕಡೆಯಿಂದ ಜನರು ಹೆಚ್ಚಾಗಿ ಮಳೆಗಾಲದಲ್ಲಿ ಬರುತ್ತಾರೆ. ಈ ಜಲಪಾತಗಳನ್ನು ವೀಕ್ಷಿಸಲು ಅಡ್ಡದಿಡ್ಡಲಾದ ದಾರಿಯನ್ನು ದಾಟಿ, ಸಂಕವನ್ನು ದಾಟಿ, ಕಲ್ಲುಬಂಡೆಗಳ ಮೇಲೆ ಹರಸಾಹಸವನ್ನೆಲ್ಲ ಮಾಡಿ ಬರಬೇಕು. ಸ್ವಲ್ಪ ಎಡವಿದರೂ ಜೀವಕ್ಕೆ ಅಪಾಯ, ಇಷ್ಟೆಲ್ಲ ಕಷ್ಟಪಟ್ಟು ಬಂದು ಈ ಜೋಗದ ನೀರು ಧುಮುಕುವ ರಮಣೀಯ ದೃಶ್ಯವನ್ನು ನೋಡಿದರೆ ಎಲ್ಲಾ ದಣಿವು ಮರೆತು ಹೋಗುತ್ತದೆ. ಇಲ್ಲಿನ ಮನಮೋಹಕ ದೃಶ್ಯವು ನಮ್ಮ ಎಲ್ಲಾ ಕಷ್ಟಗಳನ್ನು ಮರೆಸಿಬಿಡುತ್ತದೆ. ಮನಸ್ಸಿಗೆ ಎಲ್ಲಿಲ್ಲದ ನೆಮ್ಮದಿ ಮಂದಹಾಸ ನೀಡುತ್ತದೆ. ಇಲ್ಲಿ ಪ್ರವಾಸಿಗರು ಹೆಚ್ಚಾಗಿ ಟ್ರಕಿಂಗ್ ಮಾಡಲು ಇಷ್ಟಪಡುತ್ತಾರೆ, ಈ ಜಲಪಾತ ಎಷ್ಟು ಅದ್ಭುತವೆಂದರೆ ದಟ್ಟವಾದ ಕಾಡಿನ ಸುಂದರ ಪರಿಸರದ ಮಧ್ಯೆ ಇರುವ ಜಲಧಾರೆ ಹಾಲಿನಂತೆ ಹರಿಯುತ್ತದೆ, ಆದರೆ ಮಳೆಗಾಲದಲ್ಲಿ ಮೈದುಂಬಿ ಹರಿಯುವ ಈ ಜಲಪಾತ ಬೇಸಿಗೆಗಾಲದಲ್ಲಿ ತುಸು ಮಂಕಾಗಿ ಹರಿಯುತ್ತದೆ.
ಪೃಥ್ವಿ ಮರಾಠಿ..
ಎಂ ಎಂ ಕಾಲೇಜು ಪತ್ರಿಕೋದ್ಯಮ ವಿಭಾಗ ಶಿರಸಿ..
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ