ಅಳಿವಿನಂಚಿನಲ್ಲಿರುವ ಕಗ್ಗ
ಭಾರತದಲ್ಲಿ ಪ್ರಾಚೀನ ಕಾಲದಿಂದಲೂ ಗೋವಿಗೆ ಅಗ್ರಮಾನ್ಯ ಸ್ಥಾನವನ್ನು ಕಲ್ಪಿಸಲಾಗಿದೆ. ಹಿಂದುಗಳಿಗೆ ಗೋವಿನಲ್ಲಿ ಮುಕ್ಕೋಟಿ ದೇವತೆಗಳು ಇವೆ ಎಂಬ ನಂಬಿಕೆಯಿಂದ ಗೋವು ಪೂಜ ನಿಯವಾಗಿದೆ.ಹಳೆಯ ಕಾಲದಿಂದಲೂ ಭಾರತದ ಜನರು ಗೋವುಗಳ ಸಾಕಾಣಿಕೆ ಮಾಡಿದ್ದರಿಂದ ಅನೇಕ ದೇಶಿಯ ತಳಿಗಳ ಹುಟ್ಟಿಗೆ ಹಾಗೂ ಬೆಳವಣಿಗೆಗೆ ಕಾರಣವಾಯಿತು.ಗಿರ್, ಸಾಹಿವಾಲ , ರೆಡ್ ಸಿಂಧಿ, ಕಾಂಕ್ರೇಜ್, ಹಳ್ಳಿಕಾರ್, ಮಲೆನಾಡು ಗಿಡ್ಡ ಹೀಗೆ ಇನ್ನಿತರ ಕೆಲವೇ ಕೆಲವು ತಳಿಗಳು ಮಾತ್ರ ಇಂದು ಹೆಚ್ಚಾಗಿ ಕಾಣಿಸುತ್ತಿವೆ.
ಅಳಿವಿನಂಚಿನಲ್ಲಿರುವ ಭಾರತೀಯ ಗೋತಳಿಗಳ ಪಟ್ಟಿಗೆ ಒಂದು ಕಾಲನ್ನು ಕಿತ್ತಿಟ್ಟ ವಿಶಿಷ್ಟ ತಳಿ ಕಗ್ಗ .ಇವು ಮಲೆನಾಡಿನ ಕೆಲವು ಭಾಗಗಳಲ್ಲಿ ಮಾತ್ರ ಕಾಣಸಿಗುತ್ತವೆ.ಹಿಂದೆ ಈ ತಳಿಯ ಹೋರಿಗಳನ್ನು ಹೊಲವನ್ನು ಉಳುಮೆ ಮಾಡಲು ಬಳಸುತ್ತಿದ್ದರು .ಇವು ಕಪ್ಪು, ಬಿಳಿ, ನಸುಗೆಂಪು, ಬೂದು, ಹೀಗೆ ನಾನಾ ವರ್ಣದಲ್ಲಿ ಕಂಡು ಬರುತ್ತವೆ. ಬಹುಶಹ ಮಲೆನಾಡು ಗಿಡ್ಡ, ಓಂಗೋಲ್ ಮತ್ತು ಕಿಲಾರಿ ತಳಿಗಳ ಮಿಶ್ರಣದಿಂದ ಉತ್ಪತ್ತಿಯಾದ ಜಾತಿಯಾಗಿದೆ.ಹೋರಿಗಳು ಓಂ ಗೋಲ್ ತಳಿಯಂತೆ ದೇಹದ ರೂಪವನ್ನು ಹೊಂದಿರುತ್ತವೆ. ಮಲೆನಾಡು ಗಿಡ್ಡಕ್ಕಿಂತ ಬಲವಾದ ಕಾಲುಗಳನ್ನು ಹೊಂದಿದ್ದು, ಗಾತ್ರದಲ್ಲೂ ಸ್ವಲ್ಪ ದೊಡ್ಡದಿರುತ್ತವೆ. ಕೋಡುಗಳು ಅಗಲ, ನೇರ ಮತ್ತು ನೀಳವಾಗಿದ್ದು ತಳಿಯ ಬಲಿಷ್ಠತೆಯನ್ನು ತೋರ್ಪಡಿಸುತ್ತವೆ. ಸರಾಸರಿ ದಿನವೊಂದಕ್ಕೆ ನಾಲ್ಕು ಲೀಟರ್, ಗರಿಷ್ಠ ದಿನಕ್ಕೆ ಎಂಟು ಲೀಟರ್ ಹಾಲನ್ನು ಕೊಡಬಲ್ಲವು.ಇದರ ಹಾಲು ಔಷಧೀಯ ಗುಣ ಹೊಂದಿದ್ದು, ಬುದ್ಧಿ ಶಕ್ತಿಯನ್ನು ವೃದ್ಧಿಗೊಳಿಸುವ ಹಾಗೂ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಅಂಶಗಳು ಇರುತ್ತವೆ. ಈ ತಳಿಗಳು ಸರಾಸರಿ 25ರಿಂದ 30 ವರ್ಷ ಬದುಕುತ್ತವೆ. ಒಟ್ಟಿನಲ್ಲಿ ಉತ್ತಮ ಗುಣಮಟ್ಟದ ಹಾಲನ್ನು ನೀಡುವ ಮತ್ತು ಚೆನ್ನಾಗಿ ಕೆಲಸ ಕೊಡುವ ವಿಶಿಷ್ಟ ತಳಿಯಾಗಿದೆ.
ಇತ್ತೀಚಿನ ದಿನಗಳಲ್ಲಿ ಎತ್ತುಗಳ ಆಧಾರಿತ ಕೃಷಿ ನಾಶವಾಗಿ ಕೇವಲ ಯಂತ್ರ ಚಾಲಿತ ಕೃಷಿಯಿಂದ ದೇಶ ಮುನ್ನಡೆಯುತ್ತಿದೆ.ಮತ್ತು ಕ್ಷೀರ ಕ್ರಾಂತಿಯಿಂದೀಚೆಗೆ ಇಂತಹ ತಳಿಯ ಹಸುಗಳು ಇರುವ ಕೊಟ್ಟಿಗೆಗೆ ಅಧಿಕ ಹಾಲು ಹಿಂಡುವ ಜರ್ಸಿ ಎಚ್.ಎಫ್ ತಳಿಗಳು ಬಂದಿದ್ದರಿಂದ ಇವುಗಳ ಉಳಿಯುವಿಕೆಗೆ ಮಾರಕವಾಗಿದೆ. ಹಾಗಾಗಿ ಕಗ್ಗ ತಳಿಯ ಹೋರಿಗಳು ಇತರೆ ತಳಿಯ ಹಸುಗಳೊಂದಿಗೆ ಸೇರಿ, ಹಾಗೂ ಕಗ್ಗ ಹಸುಗಳು ಇತರೆ ತಳಿಯ ಹೋರಿಗಳೊಂದಿಗೆ ಸಂಕರವಾಗಿ ಮಿಶ್ರತಳಿಯ ಕರುಗಳು ಜನಿಸುತ್ತಿರುವುದರಿಂದ ಶುದ್ಧ ಕಗ್ಗ ತಳಿಯ ಕರುಗಳ ಸಂಖ್ಯೆ ಗಣನೀಯವಾಗಿ ಕ್ಷೀಣಿಸುತ್ತಿದೆ.
9 ವರ್ಷಗಳ ಹಿಂದೆ ಮಲೆನಾಡು ಗಿಡ್ಡ ತಳಿಗೆ ರಾಷ್ಟ್ರೀಯ ಮಾನ್ಯತೆ ಸಿಕ್ಕಿದಂತೆ ಕಗ್ಗಕ್ಕೂ ಸಿಕ್ಕಿದ್ದರೆ, ಇಂದು ಈ ಸ್ಥಿತಿ ಬರುವುದಿಲ್ಲವಾಗಿತ್ತೇನೋ. ಸಾವಿರ ಮಂದಿ ಸಾಕದಿದ್ದರೂ, ನೂರು ಮಂದಿಯಾದರೂ ಸಾಕುತ್ತಿದ್ದರು. ಆದರೆ ಈಗಲೂ ಕಾಲ ಮಿಂಚಿಲ್ಲ. ಸರ್ಕಾರ ಶೀಘ್ರವಾಗಿ ಎಚ್ಚೆತ್ತುಕೊಂಡು ಕಗ್ಗದ ಮೇಲೆ ಸಂಶೋಧನೆ ಮಾಡಿ ರಾಷ್ಟ್ರೀಯ ಮಾನ್ಯತೆ ನೀಡಿದರೆ, ಈ ತಳಿಯನ್ನು ಖಂಡಿತವಾಗಿಯೂ ಉಳಿಸಿಕೊಳ್ಳಬಹುದಾಗಿದೆ.
-- ಸುಶಾಂತ ಕೊಪ್ಪೇಸರ.
ಪತ್ರಿಕೋದ್ಯಮ ವಿಭಾಗ,
ಎಂ.ಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯ ಶಿರಸಿ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ