ಒಲಿದರು ಸೌದೆಯ ಒಲೆಗೆ
ಸೌದೆ ಒಲೆ ಎಂದಾಕ್ಷಣ ನಮ್ಮ ಪೂರ್ವಜರ ಹಾಗೂ ಬಾಲ್ಯದ ನೆನಪು ಮರುಕಳಿಸುತ್ತದೆ, ಕಾರಣ ಅಂದಿನ ಕಾಲದಲ್ಲಿ ಪ್ರತಿಯೊಬ್ಬರ ಮನೆಗಳು ಮಣ್ಣು ಹಾಗೂ ಇಟ್ಟಿಗೆಗಳಿಂದ ನಿರ್ಮಿಸಿದ ಸೌದೆ ಒಲೆಗಳನ್ನು ಒಳಗೊಂಡಿರುತ್ತಿದ್ದವು, ಹಾಗೂ ಒಲೆಗೆ ಆಧಾರವಾಗಿರುವ ಸೌದೆಗಳನ್ನು ಹಳ್ಳಿಯ ಜನರು ತಾವು ವಾಸ ಮಾಡುತ್ತಿದ್ದ ಸುತ್ತ-ಮುತ್ತಲಿನ ಪ್ರದೇಶಗಳಿಗೆ ಹೋಗಿ ಮಳೆಗಾಲಕ್ಕೂ ಕೂಡ ಸಾಕಾಗುವಷ್ಟು ಸೌದೆಗಳನ್ನು ಮೈಸು ಡುವ ಬಿಸಿಲಿನಲ್ಲಿ ಸಂಗ್ರಹಿಸಿಕೊಂಡು ಮನೆಯಲ್ಲಿ ಕ್ರೂಡಿಕರಿಸುತ್ತಿದ್ದರು. ಇದು ಹಳ್ಳಿಯ ಜನರಿಗೆ ಬಹಳ ಸುಲಭವಾಗಿ ಅನುಕೂಲವಾಗಿತ್ತು, ಆದರೆ ನಗರ ಪ್ರದೇಶದಲ್ಲಿ ವಾಸಿಸುವಂತಹ ಜನರು ಹಣ ನೀಡುವ ಮೂಲಕ ತಮಗೆ ಬೇಕಾಗುವಷ್ಟು ಸೌದೆಗಳನ್ನು ತರಿಸಿಕೊಳ್ಳುತ್ತಿದ್ದರು, ಸೌದೆಗಳನ್ನು ಸಂಗ್ರಹಿಸುವ ಸ್ವರೂಪ ಬೇರೆ ಬೇರೆಯಾಗಿದ್ದರು ಎರಡು ಪ್ರದೇಶಗಳ ಜನರ ಉದ್ದೇಶ ಒಂದೇ ಆಗಿತ್ತು.
ನಮ್ಮ ಮನೆಯಲ್ಲಿ ಅಂತೂ ಹೆಚ್ಚಾಗಿ ಸೌದೆ ಒಲೆಯನ್ನು ಉಪಯೋಗಿಸುತ್ತಿದ್ದೆವು, ಪ್ರತಿನಿತ್ಯವೂ ತಾಯಿ ನಮಗೆ ಒಲೆಯ ಮುಂದೆ ಕುಳಿತುಕೊಂಡು ಅದರಿಂದ ಎದುರಾಗುವ ಬೆಂಕಿಯ ತಾಪ ಮತ್ತು ಹೊಗೆಯನ್ನು ತಾನು ಅನುಭವಿಸಿ, ನಮಗೆ ಮಾತ್ರ ರುಚಿಕರವಾದ ಅಡುಗೆಯನ್ನು ಮಾಡಿ ಉಣಬಡಿಸುತ್ತಿದ್ದಳು. ಅಬ್ಬಾ ಆ ರುಚಿಕರವಾದ ಊಟವನ್ನು ಸವಿಯಲು ನಾನು ಮಾತ್ರ ಹಂಬಲಿಸುತ್ತಿದ್ದೆ, ಕೇವಲ ಅಡುಗೆ ಮಾತ್ರವಲ್ಲದೆ ನಮ್ಮ ದೈನಂದಿನ ಜೀವನಕ್ಕೆ ಅವಶ್ಯವಿರುವ ಕೆಲವು ಪರಿಕರಗಳು ಸೌದೆ ಒಲೆಯ ಮುಖಾಂತರವೇ ಸಿದ್ಧವಾಗುತ್ತಿದ್ದವು.
*ಕಾಲಾಯ ತಸ್ಮೈ ನಮಃ* ಎಂಬ ಮಾತಿನ ಹಾಗೇ ಪ್ರಾಚೀನ ಕಾಲವು ಆಧುನಿಕ ಕಾಲವಾಗಿ ಬದಲಾಗುತ್ತಿದ್ದಂತೆ ಕಾಲದೊಂದಿಗೆ ಸಾಕಷ್ಟು ವಿಷಯಗಳು ಬದಲಾದವು, ನೋಡು ನೋಡುತ್ತಿದ್ದಂತೆ ಸಾಕಷ್ಟು ಮನೆಗಳಲ್ಲಿ ಸೌದೆ ಒಲೆಗಳು ಕಣ್ಮರೆಯಾಗಿ ಅವುಗಳ ಜಾಗವನ್ನು ಅನಿಲದ ( ಗ್ಯಾಸ್) ಒಲೆಗಳು ಆಕ್ರಮಿಸಿಕೊಂಡವು. ಜನರು ಸಹ ಸೌದೆಗಳನ್ನು ತರುವ ಮತ್ತು ಒಲೆಯ ಮುಂದೆ ಕುಳಿತು ಅದರ ಹೊಗೆಯನ್ನು ಅನುಭವಿಸುವ ಸಮಸ್ಯೆ ತಪ್ಪುತ್ತದೆ ಎಂಬ ಉದ್ದೇಶದಿಂದ ಇವುಗಳ ಮೊರೆ ಹೋದರು. ಕೆಲವು ಸಂದರ್ಭಗಳಲ್ಲಿ ನಮ್ಮ ಅವಶ್ಯಕತೆಗೆ ತಕ್ಕಂತೆ ಅ
ವುಗಳಿಂದ ನಮಗೆ ಸಾಕಷ್ಟು ಉಪಯೋಗವಾಗಿರಬಹುದು, ಆದರೆ ಸೌದೆ ಒಲೆಗಳಿಂದ ಸಿಗುವಂತಹ ಬೆಂಕಿಯ ಬೆಚ್ಚಗಿನ ತಾಪಮಾನ ಹಾಗೂ ಅಡುಗೆಯ ಮೂಲ ರುಚಿಯು ಈ ಅನಿಲದ ಒಲೆಗಳಿಂದ ಸಿಗುವುದು ತುಂಬಾ ಕಡಿಮೆ, ಹಾಗೆ ಇವುಗಳಿಂದ ಅಡುಗೆ ಮಾಡುತ್ತಿರುವ ಸಂದರ್ಭಗಳಲ್ಲಿ ಅದೆಷ್ಟು ಜನರು ತಮ್ಮ ನಿರ್ಲಕ್ಷ ದಿಂದ ಜೀವವನ್ನು ಕಳೆದುಕೊಂಡಿದ್ದಾರೆ, ಆದ್ದರಿಂದ ಉಪಯೋಗದಷ್ಟೇ ಅಪಾಯವು ಕೂಡ ಇದೆ.
ಪ್ರಸ್ತುತವಾಗಿ ಈ ಕೆಲವು ದಿನಗಳ ಹಿಂದೆ ಅಮೇರಿಕಾ, ಇಸ್ರೇಲ್, ಇರಾನ್, ಈ ದೇಶಗಳ ನಡುವೆ ಯುದ್ಧವು ಪ್ರಾರಂಭಗೊಂಡಿದ್ದರಿಂದ, ಭಾರತಕ್ಕೆ ಅನಿಲದ ಕೊರತೆ ಉಂಟಾಯಿತು. ಇದರಿಂದ ಇವುಗಳನ್ನು ನಂಬಿಕೊಂಡು ಜೀವನ ಸಾಗಿಸುತ್ತಿದ್ದ, ಅದೆಷ್ಟೋ ಹೋಟೆಲ್ ಗಳು ಹಾಗೂ ಬೀದಿ ಬದೀಯ ವ್ಯಾಪಾರಸ್ಥರಿಗೆ ಬಾರಿ ಪ್ರಮಾಣದ ನಷ್ಟವಾಗಿ, *ಮರಳಿ ಮಣ್ಣಿಗೆ* ಎಂಬ ಮಾತಿನಂತೆ ಹಲವಾರು ಹೋಟೆಲ್ಗಳು ಉಪಹಾರದ ಅಂಗಡಿಗಳು ಅಷ್ಟೇ ಅಲ್ಲದೆ ಸರ್ಕಾರದ ನಿಯಂತ್ರಣದಲ್ಲಿರುವ ವಸತಿ ನಿಲಯಗಳು ಸಹ ಪುನಹ ಸೌದೆ ಒಲೆಗಳನ್ನು ಬಳಸಿಕೊಂಡು ಕೆಲವು ದಿನಗಳ ಕಾಲ ಆಹಾರ ತಯಾರಿಸುತ್ತಿರುವಂತಹ ದೃಶ್ಯಗಳು ಮಾಧ್ಯಮಗಳಲ್ಲಿ ಹಾಗೂ ಪತ್ರಿಕೆಗಳಲ್ಲಿ ಕಾಣಿಸಿತೊಡಗಿದವು. ಆದ್ದರಿಂದ ಕೆಲವೊಂದು ಬಾರಿ ನಾವು ಆರ್ಥಿಕವಾಗಿ ಮತ್ತು ತಾಂತ್ರಿಕವಾಗಿ, ಎಷ್ಟೇ ಅಭಿವೃದ್ಧಿ ಹೊಂದಿದ್ದರೂ ಕೆಲವು ಸಂದರ್ಭ ಸನ್ನಿವೇಶಗಳು ನಮ್ಮನ್ನು ಮತ್ತೆ ಹಿಂದಿನ ಕಾಲಘಟ್ಟಕ್ಕೆ ತೆರಳುವಂತೆ ಮಾಡುತ್ತವೆ, ಇದಕ್ಕೆ ಈ ಸನ್ನಿವೇಶವೇ ಉದಾರಣೆಯಾಗಿದೆ.
ವಿನಾಯಕ ಪಾಟೀಲ್

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ