ಅಪ್ಪ

'ಅಪ್ಪ' ಎನ್ನುವ ಈ ಶಬ್ದದಲ್ಲಿ ಅದೆಂಥಾ ಗತ್ತು ಗಾಂಭೀರ್ಯ, ದೇವರು ತಾನೂ ಎಲ್ಲ ಕಡೆ ಇರೋಕೆ ಸಾಧ್ಯವಿಲ್ಲ, ಅಂತಾ ಗೊತ್ತಾಗಿ 'ತಾಯಿ'ನ ಸೃಷ್ಟಿ ಮಾಡಿದ, ಏಕಕಾಲದಲ್ಲಿ ತನ್ನಿಂದ ಎಲ್ಲರನ್ನು ಸಲಹಲು ಸಾಧ್ಯವಿಲ್ಲ ಎಂದು ತಿಳಿದು ಅಪ್ಪನನ್ನು ಸೃಷ್ಟಿಸಿದ, ಅಪ್ಪ ಅನ್ನೋ ಪದಕ್ಕೆ ಸಾವಿರ ಆನೆಗಳ ಬಲ, ದರ್ಪ, ಕೋಪ, ಅತಿ ಎನಿಸುವ ಶಿಸ್ತು, ಅನುಮಾನ, ಹಾಗಂತ ಆತನಲ್ಲಿ ಪ್ರೀತಿಯಿಲ್ಲ ಎಂದುಕೊಂಡರೇ ಅದು ತಪ್ಪಾಗುತ್ತದೆ. ಆತನಲ್ಲಿ ಅತಿಯಾದ ಒಲವಿದೆ. ಆದರೆ  ತಾಯಿಯ ಹಾಗೆ ತನ್ನ ಪ್ರೀತಿಯನ್ನು ತೋರಗೊಡಲಾರ. 


               ಅಪ್ಪನ ಪ್ರೀತಿಯನ್ನು ಅರ್ಥ ಮಾಡಿಕೊಳ್ಳುವುದು ತುಂಬಾನೇ ಕಷ್ಟ. ಅಪ್ಪ ಎಂದರೆ ನಮಗೆ ಬೇಕಾಗುವ ಮ್ಯಾಜಿಕ್ ಬಾಕ್ಸ್, ಸಣ್ಣ ಸ್ಲೇಟಿನಿಂದ, ಹಿಡಿದು ದೊಡ್ಡ ಕಾರಿನವರೆಗೂ ನಮ್ಮೆಲ್ಲ ಬಯಕೆಗಳನ್ನ ತನ್ನ ಶಕ್ತಿಗೆ ಅನುಸಾರವಾಗಿ ತುಂಬಿದವನು. ಮಕ್ಕಳ ಪಾಲಿಗೆ  ಅಪ್ಪನೇ ಮೊದಲ ಹೀರೋ, ಅಪ್ಪನ ತೋರು ಬೆರಳು ಹಿಡಿದು ಸಂತೆಯಲ್ಲಿ ಜಗತ್ತನ್ನೆ  ತೋರಿದವ. ದಶಕಗಳ ಹಿಂದೆ ಅಪ್ಪ ಎಂದರೆ ಮಕ್ಕಳ ಮೊಗದಲ್ಲಿ ಮಾಡುತ್ತಿದ್ದ ಭಾವ ಭಯ. ಆದರೆ ಮಕ್ಕಳ ಡಿಮ್ಯಾಂಡುಗಳು ಮೊದಲ ತಾಯಿಯ ಬಳಿಯೇ ಹೇಳಿಕೊಳ್ಳುತ್ತಾರೆ. ಏನ್ನೇ ವಸ್ತುವನ್ನು ಅಪ್ಪನ ಹತ್ತಿರ ಕೇಳಬೇಕಾದರೂ ಅದಕ್ಕೆ ಅಮ್ಮನ ಮಧ್ಯಸ್ಥಿಕೆ ಬೇಕೆಬೇಕು. ಅಪ್ಪನ ಮುಂದೆ ಧೈರ್ಯವಾಗಿ ಹೋಗಿ ಕೇಳುವ ಧೈರ್ಯ ಇಲ್ಲವೇ ಇಲ್ಲ. ಹಾಗೆಂದು ಆತ ಸರ್ವಾಧಿಕಾರಿಯಲ್ಲ, ಬದಲಿಗೆ ಸರಿ ತಪ್ಪುಗಳನ್ನು ತಿದ್ದುವ ಮಾರ್ಗದರ್ಶಕ. ಆದರೆ ಕಾಲ ಬದಲಾದಂತೆ ಅಪ್ಪನೂ ಸಹ ಬದಲಾಗುತ್ತಿದ್ದಾನೆ. ಅಂದಿನ ಅಪ್ಪನಲ್ಲಿದ್ದ ದರ್ಪ, ಕೋಪ, ಅನುಮಾನ ಇಂದಿನ ಅಪ್ಪಂದಿರಲ್ಲಿಲ್ಲ ಕೊಂಚ ಕೊಂಚವಾಗಿ ಕಡಿಮೆಯಾಗುತ್ತಿದೆ. 

                 ಹಿಂದೆಲ್ಲ ಒಂದು ವರ್ಷಕ್ಕೊ.. ಆರು ತಿಂಗಳಿಗೋ ನಡೆಯುವ ಜಾತ್ರೆಗೆ ಮಕ್ಕಳನ್ನು ಕರೆದುಕೊಂಡು ಹೋದರೆ ಎಲ್ಲಿಲ್ಲದ ಸಂತೋಷವಾಗುತ್ತಿತ್ತು. ವರ್ಷಕ್ಕೊಮ್ಮೆ ಬರುವ ಜಾತ್ರೆಗೆ ಹೋಗಲು ಪಕ್ಷಿಗಳಂತೆ ಕಾಯುತ್ತಿರಬೇಕಾಗಿತ್ತು. ಆದ್ರೆ ಇಂದು ವೀಕೆಂಡ್ ಬಂತು ಅಂದರೆ ಸಾಕು ಮಾಲ್, ಸಿನಿಮಾ ಅಂತಾ ಮಕ್ಕಳು ಅಪ್ಪನ ಜೊತೆಗೆ ಹೋಗ್ತಾರೆ. ಮಕ್ಕಳ ಮನಸ್ಸಿನಲ್ಲಿ ಅಪ್ಪ ಎವರೆಸ್ಟಿಗೂ ಎತ್ತರದ ಸ್ಥಾನದಲ್ಲಿದ್ದಾನೆ.

                 ಅಪ್ಪ ಎಂದರೆ ಈಗಿನ ಮಕ್ಕಳಲ್ಲಿ ಭಯದ ಬದಲು ಮಂದಹಾಸ ಮೂಡುತ್ತದೆ. ಈಗಿನ ಅಪ್ಪ ಮಕ್ಕಳನ್ನು ಅನುಮಾನದಿಂದ ನೋಡಲ್ಲ, ಬದಲಿಗೆ ಅಭಿಮಾನದಿಂದ ಕಾಣುತ್ತಾನೆ. ಅವರ ಬಯಕೆಗಳಿಗೆ ಸಮಸ್ಯೆಗಳಿಗೆ ಕಿವಿಯಾಗುತ್ತಾನೆ. ಅವರ ಕೋರಿಕೆಗಳ ಹಿಂದಿನ ಅವಶ್ಯಕತೆಗಳನ್ನು ಅರಿಯಲು ಮನಸ್ಸು ಮಾಡುತ್ತಿದ್ದಾನೆ. ಹಿಂದೆಲ್ಲಾ ತನ್ನ ಇಚ್ಚೆ ಗನುಸಾರವಾಗಿ ಮಕ್ಕಳು ಬೆಳೆಯಬೇಕು ಎಂದು ಬಯಸುತ್ತಿದ್ದ ಅಪ್ಪ. ಈಗ ಮಕ್ಕಳ ಓದಿನ ಕಡೆಗೆ, ಆಟದ ಕಡೆಗೆ, ಸ್ನೇಹಿತರ ಕಡೆಗೆ, ಅಷ್ಟೆ ಏಕೆ ಸಂಗಾತಿಯ ಆಯ್ಕೆಯ ವಿಷಯದಲ್ಲೂ ಸ್ವಾತಂತ್ರ್ಯವನ್ನು  ನೀಡಿದ್ದಾನೆ. ಮಕ್ಕಳ ಮನಸ್ಸನ್ನು ಅರಿತಿದ್ದಾನೆ. ಅಪ್ಪ ಮತ್ತು ಮಕ್ಕಳ ನಡುವಿನ ಅಂತರ ಕಡಿಮೆಯಾಗುತ್ತಿದೆ. 

                  ಅಷ್ಟೇ ಅಲ್ಲದೆ ಅಪ್ಪ ಮತ್ತು ಮಗಳ ನಡುವಿನ ಸಂಬಂಧ ಅನ್ನೊದೇ ಒಂಥರಾ ಚಂದ. ಕರಗದಷ್ಟು ಪ್ರೀತಿ ಅನ್ನೊ ಆಸ್ತಿ ಕೊಡುವ ತಂದೆ, ಮಗಳ ಮೊದಲ ಹೀರೋ. ಅಪ್ಪನೆಂದರೆ ಹಬ್ಬುವ ಬಳ್ಳಿಗೆ ಆಸರೆ, ಮುಟ್ಟಿಸುವ ಹೊಣೆ ಸದಾ ಜೊತೆಯಾಗಿರುವ ಬೆರಳು, ಬದುಕಿನ ಎಲ್ಲವೂ ಅಪ್ಪ. ಹೆಣ್ಣು ಮಕ್ಕಳು ತಾಯಿಗಿಂತ, ತಂದೆಯನ್ನು ಹಚ್ಕೊಳೋದೆ ಜಾಸ್ತಿಯಾಗುತ್ತಿದೆ. 

                    ಒಟ್ಟಿನಲ್ಲಿ ಹೇಳುವುದಾದರೆ ಅಪ್ಪ ಬರೀ ಅಪ್ಪ ನಾಗಿಯೂ ಉಳಿಯದೇ ಸ್ನೇಹಿತನಾಗಿ, ಹಿತೈಷಿಯಾಗಿ ಬೆಳೆದಿದ್ದಾನೆ. ಎಷ್ಟೋ ಮನೆಗಳಲ್ಲಿ ಅಪ್ಪ ಅಮ್ಮನ ಸ್ಥಾನ ತುಂಬುತ್ತಾರೆ. ಇಂದಿನ ಬಹುತೇಕ ಮಕ್ಕಳಿಗೆ ಅಪ್ಪನ ಕೈಯಲ್ಲಿ ಛಡಿಯೇಟು ತಿಂದ ಅನುಭವವಿಲ್ಲ. ಅಪ್ಪ ಒಬ್ಬ ಸ್ನೇಹಿತ. ಎಲ್ಲಾ ರೀತಿಯ ವಿಷಯಗಳನ್ನು ಷೇರ ಮಾಡಿಕೊಳ್ಳಬಲ್ಲ ಗೆಳೆಯ. ಮಕ್ಕಳಿಗೆ ಅಪ್ಪನ ಬಗ್ಗೆ ಭಯವಿಲ್ಲ. ಬದಲಾಗುತ್ತಿರುವ ಕಾಲಮಾನಕ್ಕೆ ತಕ್ಕಂತೆ ಅಪ್ಪ ಕೂಡ ಬದಲಾಗಿದ್ದಾನೆ. ಬದಲಾಗುತ್ತಿದ್ದಾನೆ... 


ಮೇಘನಾ ಭೋವಿ

ಬಿ. ಎ. I

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ನಮ್ಮ ಅರಳೇಶ್ವರ

ಡಮಾಮಿ

ನೋಡ ಬಾ ನಮ್ಮೂರ ಸಸ್ಯಲೋಕ "