"ಯಾವುದಯ್ಯಾ ಧರ್ಮ...!!!


       "ದಯವೇ ಧರ್ಮದ ಮೂಲವಯ್ಯ "ಎಂದರು ಅಂದಿನ ಶರಣರು "ಹಿಂಸೆಯೆ ಧರ್ಮಕೆ ರಕ್ಷೆಯಯ್ಯ" ಎಂದರು ಇಂದಿನ ಮತಾಂಧರು.ಧರ್ಮ ಮಾನವನನ್ನು ನಿಯಂತ್ರಿಸಿ ಸನ್ಮಾರ್ಗದಲ್ಲಿ ಸಾಗುವಂತೆ ಮಾಡಲು ಸಂಸ್ಕೃತಿ,ಸಂಪ್ರದಾಯ,

ಆಚಾರ,ವಿಚಾರ,ನೀತಿ ತತ್ವ ಬೋಧನೆ,ದೈವ ನಂಬಿಕೆಯೊಂದಿಗೆ ಆಚರಣೆಗೆ ಬಂದ ಒಂದು ಆಧ್ಯಾತ್ಮಿಕ ಅಂಶ.ಪ್ರಸ್ತುತ ಭಾರತದಲ್ಲಿ ಧರ್ಮ ಧ್ವೇಷ,ಅಸೂಹೆಯ ಕಿಚ್ಚೆಬ್ಬಿಸಿ,ಸಾಮರಸ್ಯ ಭರಿತ ಸಹಬಾಳ್ವೆಗೆ ಹುಳಿಹಿಂಡುತ್ತಿರುವ,ಪರಸ್ಪರ ಹಿಂಸಾಚಾರದಲ್ಲಿ ತೊಡಗುವಂತೆ ಮಾಡುತ್ತಿರುವ ರಾಕ್ಷಸತ್ವವಾಗಿ ಬದಲಾಗುತ್ತಿದೆ.ದಿನ ಬೆಳಗಾದರೆ 

 ಮತೀಯ ಗಲಭೆಗಳು,ಕೊಲೆ ಹಿಂಸಾಚಾರದ ಸುದ್ದಿಗಳೇ ಶುಭೋದಯ ತಿಳಿಸುವಂತೆ ಕಣ್ಣೆದುರಿಗೆ ಬರುತ್ತವೆ.ಧರ್ಮ ನೀರಪೇಕ್ಷ ರಾಷ್ಟ್ರ ಭಾರತ ಧರ್ಮ ರಕ್ಷಾ ಸಂಗ್ರಾಮದ ಕುರುಕ್ಷೇತ್ರವಾಗಿದೆ.                         

         ಧರ್ಮದ ಹೆಸರಿನಲ್ಲಿ ಹಿಂಸಾಚಾರಕ್ಕೆ ಇಳಿದವರೆಲ್ಲ ಧರ್ಮರಕ್ಷಕರೆಂಬ ಹಣೆಪಟ್ಟಿ ಹಚ್ಚಿ ಕೊಂಡಿದ್ದಾರೆ.ಇವರೆಲ್ಲ ನಿಜವಾಗಿಯೂ ಧರ್ಮರಕ್ಷಕರೆ?.ಧರ್ಮ ರಕ್ಷಕರೇ ಆಗಿದ್ದರೆ ಧರ್ಮವಿರೋದಿ ಕೆಲಸವನ್ನೆಕೆ ಮಾಡುತಿದ್ದಾರೆ.ಧರ್ಮ ರಕ್ಷಣೆಯ ಹೆಸರಿನಲ್ಲಿ ಕೊಲೆ,ಹಿಂಸಾಚಾರಮಾಡುತ್ತಿರುವರಲ್ಲ,

"ದಯವೇ ಧರ್ಮದ ಮೂಲ,ಹಿಂಸೆ ಮಹಾಪಾಪವೆಂದು" ಹೇಳಿದ್ದು ಧರ್ಮವೆ ಅಲ್ಲವೇ ?.                

             ಧರ್ಮ ರಕ್ಷಣೆಯ ಹೆಸರಿನಲ್ಲಿ ಎಷ್ಟೋ ಪ್ರಾಣಗಳು ಹಾರಿಹೋದವು,

ಅದೆಷ್ಟೋ ಕುಟುಂಬಗಳು ಅನಾಥವಾದವು .ಅದೆಷ್ಟು ಆಸ್ತಿ ಪಾಸ್ತಿ ನಷ್ಟವಾಯಿತೋ ಗಣನೆಗೆ  ಬಾರದು.ಧರ್ಮದ ಹೆಸರಿನಲ್ಲಿ ತಮ್ಮ ಬೇಳೆ ಬೇಯಿಸಿ ಕೊಳ್ಳಲು ಹೊರಟ ಅದೆಷ್ಟೋ ಕಾಣದ ಕೈಗಳ ಹೊಡೆತಕ್ಕೆ ಸಿಲುಕಿ ಅದೆಷ್ಟೋ ಮುಗ್ಧರ  ಬದುಕುಬಲಿಯಾಗಿದೆ.ಮನುಷ್ಯನ ವಿವೇಕದ ಮೇಲೆ ಧರ್ಮ ಎಂಬ ಪೊರೆಕೂತು ಮತಾಂಧರಾಗಿದ್ದಾರೆ.                        

         ಧರ್ಮ ರಕ್ಷಣೆಗೆಂದು,ಧರ್ಮದ ಅರ್ಥ ತಿಳಿಸಲೆಂದು  ದೀಕ್ಷೆಹೊತ್ತು,ಕಾವಿತೊಟ್ಟವರು ಬೋಧಿಸುತ್ತಿರುವುದು ನಿಜವಾಗಿಯೂ ಧರ್ಮವೋ ಅಥವಾ ಅಧರ್ಮವೊ.ಧರ್ಮದ ನಿಜಾರ್ಥವನ್ನು ತಿಳಿಸಿ ಜನರ ಮನಸ್ಸಿನಲ್ಲಿ ಕವಿದಿದ್ದ ಮತಾಂಧತೆಯ ಮಸುಕನ್ನು ಅಳಿಸಬೇಕಾದವರೆ ಇನ್ನೂ ಗಾಢ  ವಾಗಿಸುತ್ತಿದ್ದಾರೆ.ಅನ್ಯಧರ್ಮದೊಂದಿಗಲ್ಲದೆ ಸ್ವಧರ್ಮದೊಂದಿಗೆ ಪೈಪೋಟಿಗಿಳಿಯುವಂತೆ ಉತ್ತೇಜಿಸುತ್ತಿದ್ದಾರೆ.ಧರ್ಮ ಯುದ್ದಗಳು ಸಾಲದೆಂದು ಜಾತೀ  ಯುದ್ಧಗಳನ್ನೂ ಪ್ರಾರಂಭಿಸಿದ್ದಾರೆ.ಸಮಾಜದ ಶಾಂತಿ ಕದಡುವುದು,ಜನರ ಮನಸಿನಲ್ಲಿ ಟೊಳ್ಳು ಸಂಗತಿಗಳನ್ನು ತುಂಬುವುದು,ಧರ್ಮದ ಹೆಸರಿನಲ್ಲಿ ಕಪಟವಾದುವುದು ಧರ್ಮವೆ?

            ಜನಸೇವೆಗೆಂದು ಆಡಳಿತಕ್ಕೆ ಇಳಿದವರು ಇಂದು ಧರ್ಮ ಯುದ್ಧದಲ್ಲಿ ಕತ್ತಿ ಜಳಪಿಸುತ್ತಿದ್ದಾರೆ. ಸರ್ವಧರ್ಮಗಳ ಸಾಮರಸ್ಯ ಸಾಧಿಸಲು ಮುಖ್ಯ ಪಾತ್ರ ವಹಿಸಬೇಕಾದ ರಾಜಕಾರಣಿಗಳು ವಿವಿಧ ಧರ್ಮೀಯರ ನಡುವೆ ಧರ್ಮ ಕಂದಕವನ್ನೆ ಸೃಷ್ಟಿಸುತ್ತಿದ್ದಾರೆ. ವಿವಿಧ ಧರ್ಮೀಯರ ನಡುವೆ ಸೌಹಾರ್ದತೆ ರೂಪಿಸಲು ಅವಶ್ಯವಾದ ಕಾನೂನುಗಳನ್ನು ರೂಪಿಸುವುದು ಬಿಟ್ಟು ಧರ್ಮಗಳ ನಡುವೆ ವೈಮನಸು ತರುವ ಕಾಯ್ದೆಗಳಿಂದ ದೇಶದ ಶಾಂತಿ ಕದಡುತ್ತಿದ್ದಾರೆ. ಧರ್ಮದ ಹೆಸರಿನಲ್ಲಿ ಮತದಾರರನ್ನು ಆಕರ್ಷಿಸಿ ಮತ ಬೇಟೆಗೆ ಮುಂದಾಗಿದ್ದಾರೆ. ನಿಜ ಸಂಗತಿಗಳನ್ನು ಮರೆಮಾಡಿ ಮೂಲ ಘಟನೆಗಳನ್ನು ತಿರುಚಿ ಧರ್ಮದ ಬಣ್ಣ ಬಳಿಯುವ ಮೂಲಕ ಧರ್ಮದ ಕಿಚ್ಚು ಹತ್ತಿಸುತ್ತಿದ್ದಾರೆ. ಜನರನ್ನು ಧರ್ಮದ ಮೋಹದಲ್ಲಿ ಸಿಲುಕಿಸುವ ಬರದಲ್ಲಿ ಮಂದಿರಗಳು ಮಸೀದಿಗಳಾಗಿವೆ,,,, ಮಸೀದಿಗಳು ಮಂದಿರಗಳಾಗಿವೆ.ಪ್ರಾರ್ಥನೆಯ ಲ್ಲಿ ಭಕ್ತಿಗಿಂತ ಪ್ರಾರ್ಥನೆಯ ಶಭ್ದವೇ ಮಿಗಿಲಾಯಿತು.ಹಬ್ಬದ ಅರ್ಥ ಪೂರ್ಣ ಆಚರಣೆಗಿಂತ ಆಡಂಬರದ ಮೆರವಣಿಗೆ,ಕುಣಿತ ಕುಪ್ಪಳಗಳೇ ಬೇಕಾದವು. ಧರ್ಮದ  ಕಿಚ್ಚಾರಿಸಲು ಶಾಂತಿಯ ನೀರೆರುಚುವುದನ್ನು  ಬಿಟ್ಟು ತಮ್ಮ ಪ್ರಚೋದಿತ ಮಾತುಗಳಿಂದ ದೇಶದೆಲ್ಲೆಡೆ ಧರ್ಮದ ದಳ್ಳುರಿ ವ್ಯಾಪಕವಾಗಿ ಪಸರಿಸುವಂತೆ ಮಾಡುತ್ತಿದ್ದಾರೆ. ಮತಾಂಧರ ಮತಿ ಬದಲಾಯಿಸಿ ದೇಶದ ಸ್ವಾಸ್ತ್ಯ ಕಾಪಾಡುವುದರ ಬದಲಾಗಿ ಮತಾಂಧರ ಬೆಂಬಲಕ್ಕೆ ನಿಂತು ಹಿಂಚಾಸರದಲ್ಲಿ ತೊಡಗುವಂತೆ ಪ್ರಚೋದಿಸಲಾಗುತ್ತಿದೆ .

             ತಮ್ಮ ಅಧಿಕಾರಕ್ಕಾಗಿ ಸಾಮರಸ್ಯದ ಜೀವನ ನಡೆಸುತ್ತಿದ್ದವರ ನಡುವೆ ಮತೀಯತೆಯ ವಿಷ ಬೀಜ ಬಿತ್ತಿ ತಮ್ಮ ಸ್ವಾರ್ಥ ಸಾಧನೆಗೆ ಅವಶ್ಯಕವಾದ ಬೆಳೆ ಬೆಳದು ಕೊಳ್ಳುತ್ತಿದ್ದಾರೆ. ಚುನಾವಣಾ ಪ್ರಚಾರಕ್ಕಾಗಿ ಎದ್ದು ಬಿದ್ದೂ ಕೈಲಾಗುವ,,ಕೈಲಾಗದ ಸಾಹಸಗಳನೆಲ್ಲ ಮಾಡಿ ವೋಟಿಗಾಗಿ ಕೈ ಮುಗಿದು ಬೇಡುವವರು, ಧರ್ಮದ ಹೆಸರಿನಲ್ಲಿ ಹಿಂಸಾಚಾರ ನಡೆಯುತ್ತಿರುವ ಸಂದರ್ಭದಲ್ಲಿ ಸೌಹಾರ್ದತೆ , ಏಕತೆ ಮೂಡಿಸಲು ಅಶ್ಯಕವಾದ  ಒಂದೇ ಒಂದು ಕಾರ್ಯಕ್ರಮ ಅಥವಾ ಪ್ರಚಾರವನ್ನು ಮಾಡಲಿಲ್ಲ. ಬದಲಾಗಿ ಉರಿಯುತ್ತಿರುವ ಧರ್ಮರಕ್ಷಣೆಯ ಹಿಂಸಾಚಾರದ ಬೆಂಕಿಗೆ ತುಪ್ಪ ಸುರಿಯುತ್ತಾ ತಮ್ಮ ಹಿತ ಸಾಧಿಸಿಕೊಂಡರು. ಜನರ ಮನಸ್ಸಿನಲ್ಲಿ ಮತೀಯತೆಯ ಮೋಹ ಮೂಡಿಸಿ,ದೇಶದ ಶಾಂತಿ ಕದಡಿಸಿ,ಮುಗ್ಧ ಪ್ರಜೆಗಳ ಬದುಕು ಬಲಿ ತೆಗೆದುಕೊಂಡು ತಮ್ಮ ಭವಿಷ್ಯ ಬಲಪಡಿಸಿಕೊಳ್ಳುವುದು ಧರ್ಮವೆ?,"ಜನಸೇವೆಯೆ ಜನಾರ್ಧನ ಸೇವೆ "ಎಂದಿದ್ದು ಧರ್ಮವೆ?

            ಯಾವುದೇ ಜಾತಿ,ಧರ್ಮದ ಭೇದವಿಲ್ಲದೆ ಕೂಡಿ ಕಲಿಯುತ್ತಿದ್ದ ವಿಧ್ಯಾರ್ಥಿಗಳನ್ನು ಸಹ ಬಿಡಲಿಲ್ಲ. ಅವರಲ್ಲಿಯೂ ಮತೀಯತೆಯ ವಿಷ ಬೀಜ ಬಿತ್ತಿ, ವಿದ್ಯೆಯ ಜಾಗದಲ್ಲಿ ಧರ್ಮದ ಮೋಹ 

ಸುರಿಯಲಾಯಿತು. ವೇಲು,ಶಾಲುಗಳಲೆಂಬ ಪೈಪೋಟಿಗೆ ಸಿಲುಕಿ ವಿದ್ಯೆಯೆಂಬ ಮಹಾ ಶಿಖರವೂ  ನಗಣ್ಯವಾಯಿತು. ಪಠ್ಯದಲ್ಲಿ ನೀತಿ,ಜ್ಞಾನಗಳಿಗಿಂತ ಧರ್ಮದ ಪ್ರತಿಸ್ಟೆಯೆ ಮಹದಾಯಿತು.    ಭವಿಷ್ಯದ ಆಶಾಗೋಪುರಗಳಾದ ಮಕ್ಕಳ ಮನಸಿನಲ್ಲಿ ಏಕತೆಯ ಮಹತ್ವ ತಿಳಿಸುವುದು ಬಿಟ್ಟು,    ಧರ್ಮದ ಮೋಹ ಬೆಳೆಸುವುದು  ಸರಿಯೇ??ಉತ್ತಮ ಸುಸಂಸ್ಕೃತ ಶಿಕ್ಷಣ ನೀಡ ಬೇಕೆಂದಿದ್ದು ಧರ್ಮವೇ ಅಲ್ಲವೇ?.

        ಧರ್ಮ ರಕ್ಷಣೆಗೆಂದು ಆಯಾ ಧರ್ಮದವರು ತಮ್ಮ ಧರ್ಮಗಳನ್ನು ವೈಭವೀಕರಿಸುವ ಸಂಘ ಸಂಸ್ಥೆಗಳನ್ನು ಸ್ಥಾಪಿಸಿಕೊಂದಿದ್ದಾರೆಯೆ,,,,ಹೊರತು ಸರ್ವ ಧರ್ಮಗಳ ನಡುವೆ ಸಾಮರಸ್ಯ ಸಾಧಿಸುವ ಉದ್ದೇಶದಿಂದ ಒಂದೇ ಒಂದು ಸಂಘ ಕಟ್ಟಲಿಲ್ಲ . ಸರ್ವ ಧರ್ಮಗಳನ್ನು ಸಮನಾಗಿ ಗೌರವಿಸುವುದನ್ನು ಬಿಟ್ಟು ಸ್ವಧರ್ಮ ವೈಭವೀಕರಣದಿಂದ ದೇಶದಲ್ಲಿ ಧರ್ಮ ಪೈಪೋಟಿ ಆರಂಭಿಸಿದ್ದು ಧರ್ಮವೆ?.ಸರ್ವ ಧರ್ಮಗಳನ್ನೂ ಗೌರವಿಸ ಬೇಕೆಂದು ಹೇಳಿದ್ದು ಧರ್ಮವೇ ಅಲ್ಲವೇ?.

        ಧರ್ಮದ ನೀತಿ ನಿಯಮಗಳನ್ನು ಆಚಾರ ವಿಚಾರಗಳನ್ನು ಸಂಸ್ಕೃತಿ ಸಂಪ್ರದಾಯಗಳನ್ನು ಬದಿಗೊತ್ತಿ ಧರ್ಮದ ಸೂಚಕಗಳಾದ ವೇಲು ಶಾಲು ಮಂದಿರ ಮಸೀದಿಗಳಿಂದ ಧರ್ಮ ರಕ್ಷಣೆಗೆ ಮುಂದಾಗಿದ್ದಾರೆ. ಧರ್ಮದ ರಕ್ಷಣೆ ಮಾಡಲು ತಮ್ಮ ತಮ್ಮ ಧರ್ಮಗಳನ್ನು ವೈಭವೀಕರಿಸಲು ಮುಂದಾಗಿ ತಮಗೆ ಅರಿವಿಲ್ಲದೆಯೇ ತಮ್ಮ ತಮ್ಮ ಧರ್ಮಗಳ ಮೌಲ್ಯವನ್ನು ಕನಿಷ್ಟವಾಗಿಸುತ್ತಿದ್ದಾರೆ. ಧರ್ಮ ವಿರೋಧಿ ಚಟುವಟಿಕೆಗಳಿಗೆ ಧರ್ಮ ರಕ್ಷಣೆಯ ಹೆಸರನ್ನಿಟ್ಟು ಧರ್ಮದ ಪಾವಿತ್ರ್ಯತೆಯನ್ನು ಹಾಳುಮಾಡುತ್ತದೆ ಇದ್ದಾರೆ. ಇಂತಹ ಅರ್ಥವಿಲ್ಲದ ಹೋರಾಟಗಳನ್ನು ತ್ಯಜಿಸಿ ತಮ್ಮ ತಮ್ಮ ಧರ್ಮದ ಒಳ್ಳೆಯ ವಿಚಾರಗಳು ನೀತಿ,ಭೋದನೆ,ಸಂಸ್ಕೃತಿ, ಸಂಪ್ರದಾಯಗಳನ್ನು ಆಚಾರ ವಿಚಾರಗಳನ್ನೂ ಪಾಲಿಸುತ್ತಾ ಹೋದರೆ ಯಾವುದೇ ಮತೀಯ ಗಲಭೆಗಳು ಏರ್ಪಡದೆ ತಾನಾಗಿಯೇ ಧರ್ಮಗಳು ಸದೃಢ ನೆಲೆಯನ್ನು ಕಂಡುಕೊಳ್ಳುತವೆ.. ಈ ಸತ್ಯವನ್ನು ಅರಿತುಕೊಂಡು ಸರ್ವಧರ್ಮೀಯರು ಸಹಬಾಳ್ವೆ ನಡೆಸಿದರೆ ಭಾರತ "ಸರ್ವಜನಾಗಂದ ಶಾಂತಿಯ ತೋಟವೇ" ಆಗುತ್ತದೆ ಅಲ್ಲವೇ??.


Anita B Gouda

B.A 1st

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ನಮ್ಮ ಅರಳೇಶ್ವರ

ಡಮಾಮಿ

ಗುಡಿಗಾರ ಸಮಾಜ