*"ಮೇಘರಾಜನ ಜೊತೆಯಲ್ಲಿ ಮಲೆನಾಡಿನ ಮಳೆಗಾಲದ ಮೋಜನ್ನು ಮನರಂಜಿಸುವ ಬನ್ನಿ*"  


  ಆಹಾ! ಮಳೆಗಾಲ ಬಂತೆಂದರೆ ಸಾಕು ಅದು ಮೋಜು - ಮಸ್ತಿಯ ಮಹಾ ಮಜಲನ್ನು ಎಲ್ಲರೂ ಹೆಜ್ಜೆ ಹೆಜ್ಜೆಯಾಗಿ ಅನುಭವಿಸುವರು. ಒಬ್ಬೊಬ್ಬರಿಗೆ ಒಂದೊಂದರ ಮೇಲೆ ಆಸಕ್ತಿ,ಅಭಿರುಚಿ ನನಗಂತೂ ಹರಿಯುವ ಜಲಧಾರೆಯನ್ನು ವೀಕ್ಷಿಸುವುದೇ ಮಹದಾನಂದ.  


 ಅಶ್ವಿನಿ ಇಂದ ಶುರುವಾದ ಮಳೆಯ ಆರ್ಭಟ ಸಿಡಿಲ ಭರದಂತೆ ಮೋಡ ಕರಗಿ ಹನಿಯ ರೂಪದಿ ವಸುಂಧರೆ ಸೇರುವುದು. ಹನಿ ಹನಿ ಕೂಡಿ ಹಳ್ಳವಾಗಿ ಹಳ್ಳಕೊಳ್ಳಗಳು ಒಂದೆಡೆ ಸೇರಿ ನದಿಯಾಗಿ ಮಾರ್ಪಡುತ್ತದೆ. ಹರಿವ ನದಿಯಿಂದ ಧುಮುಕುವ ಆ ನೀರಿನ ರಭಸಕ್ಕೆ ಅಡಿಯಿಂದ ಮುಡಿವರೆಗೆ ಶುಭ್ರಶೋಭಿತೆಯಾಗಿ ಸ್ವಚ್ಚಂದದ ಸೆಲೆಯಾಗಿ ಗೋಚರಿಸುವುದು. ಈ ಪ್ರಾಕೃತಿಕ ಸೌಂದರ್ಯವನ್ನು ನಮ್ಮ  ಅಕ್ಷಿಕಮಲಗಳಿಗೆ ತೋರಿಸಿದೊಡೆ ಹಿಂತಿರುಗಲು ಸಮ್ಮತಿಯನ್ನು ಕೊಡಲಾರವು.ಅದೇ ಈ ಜಲಪಾತಗಳ ವೈಶಿಷ್ಟ್ಯ.           


ಖಾದ್ಯ ಪ್ರಿಯರಿಗಂತೂ ಈ ಮಳೆಗಾಲದಲ್ಲಿ ಬಗೆಬಗೆಯಾದ ವಿಭಿನ್ನ ರೀತಿಯ ವಿಭಿನ್ನ ರೀತಿಯ ಸೊಪ್ಪು-ಸೆದೆಗಳುದೆಗಳು ಅದರಲ್ಲೂ ಅಣಬೆ, ಕಳಲೆಯಂತೂ ಬಹುಬೇಡಿಕೆಯ ವಸ್ತುಗಳಾಗಿವೆ. ಸೊಪ್ಪು ಪ್ರಿಯರಿಗೆ ಕೆಸುವಿನ ಎಲೆ,ತಟ್ಟೆ ಸೊಪ್ಪು, ಎಲೆ ದುರ್ಗೆ ಸೊಪ್ಪು, ಸಾಂಬಾರ್ ಸೊಪ್ಪು,ಹೊನ್ನಗನ್ನೇ  ಸೊಪ್ಪು, ಅಮಟೆಕಾಯಿ,ಬೃಂಗರಾಜ,ಇವೆಲ್ಲವನ್ನು ಸವಿದರೆ ನಮ್ಮ ರೋಗನಿರೋಧಕ ಶಕ್ತಿ ಹೆಚ್ಚಿಸಬಹುದು. 


         ಜಿಟಿ-ಜಿಟಿ ಮಳೆಯಲ್ಲಿ ನೆಂದು ಚಳಿಯಲ್ಲಿ ನಡುಗುವ ಜೀವಕೆ ಹುರಿದ ಹಲಸಿನ ಬೀಜ ಸವಿದರೆ ಬೆಚ್ಚಗಿನ ಅನುಭೂತಿ ಎನಿಸುವುದು. ಹುಣಸೆ ಬೀಜ ಜಗಿಯುತ್ತಾ ಹರಟೆ ಹೊಡೆಯುತ್ತಿದ್ದರೆ ಅದುವೇ ಸುಂದರ ಸೋಜಿಗ. ಅಲ್ಲದೆ ಹಿಂದೆ ಮಳೆಗಾಲದಲ್ಲಿ ತೊಯ್ಯಬಾರದೆಂದು ಮಣಭಾರದ ಕಂಬಳಿ ಹಾಕಿ ನೇಗಿಲಿನಿಂದ ಗದ್ದೆ ಹೂಡಿ  ಮನೆಗೆ ಬಂದು ಕಂಬಗಳ ಮೇಲೆ ಕಂಬಳಿಯನ್ನು ಒಣಗಿಸುವುದು ಇಂದು ಅಪರೂಪದ ಸಂಗತಿ. ಅದರ ಮುಂದುವರಿದ ರೂಪವಾಗಿ ಕೊಪ್ಪೆಯನ್ನು ಹಾಕಿ ಸ್ತ್ರೀಯರು ನಾಟಿ ಮಾಡುತ್ತಿದ್ದರೆ ಅದನ್ನು ನೋಡುವುದೇ ಒಂದು ಮಜಾ.        


    ವಿಶೇಷವೆಂದರೆ ಕಪ್ಪೆಗಳ ಕೂಗಾಟದ ಸದ್ದು ತೋಟದ ನಡುವೆ ಉಂಬಳದ ರಕ್ತ ಹೀರುವಿಕೆ, ಎರೆಹುಳುವಿನ ಹೊಯ್ದಾಟ, ಸಹಸ್ರಪದಿ ಓಡಾಟ, ಇವೆಲ್ಲವೂ ಕೆಲವರಿಗೆ ಹಿತ ಎನಿಸಿದರೆ ಕೆಲವರಿಗೆ ಕಿರಿಕಿರಿ ಅನ್ನಿಸಬಹುದು. ರಜನಿಯಲ್ಲಿ ಮಿಂಚುಳ್ಳಿಯ ಸಂಚಾರ ಅಮವಾಸ್ಯೆಯಲ್ಲಿ ಚಂದ್ರ ಬಂದಷ್ಟು ಖುಷಿ ಅನಿಸುವುದು. ಕೀಟಗಳ ಕೀಟಲೆ ಈ ಸಮಯದಲ್ಲಿ ಈ ಸಮಯದಲ್ಲಿ ಹೆಚ್ಚಿರುವುದು ಅನ್ನೋದು ಕೂಡ ಮರೆಯಬಾರದು.             


  ಮಳೆ ಬಿಸಿಲು ಕೂಡಿ ಕಾಮನಬಿಲ್ಲು ಕವಿದರೆ, ಮಳೆಯಲ್ಲಿ ನೆನೆದರೂ ಸಹಿತವಾಗಿ ಮನಸ್ಸಿಗೆ ಮುದನೀಡುತ್ತದೆ. ಮಂಜುಗಡ್ಡೆಯು ಬೀಳುತ್ತಿದ್ದರೆ ಅದನ್ನು ತಿನ್ನಲು ಮಕ್ಕಳು ಮುಗಿಬೀಳುವುದು ಮಹಾ ಸಾಹಸದ ಕಾರ್ಯ. ವಿಪರೀತ ಮಳೆಗೆ ಶಾಲಾ-ಕಾಲೇಜುಗಳು ರಜೆ ಎನ್ನುವ ಸುದ್ದಿ ಬಂದರಂತೂ ಅದಕ್ಕಿಂತ ಸಂಭ್ರಮ ಇನ್ನೇನು ಮಕ್ಕಳಿಗೆ ಕುಣಿದು ಕುಪ್ಪಳಿಸಿ ಬಿಡುವರು ತುಂತುರು  ಮಳೆ ಹನಿಗಳ ಮಧ್ಯದಲ್ಲಿ.....


✍️ನಾಗರಾಜ್ ಶೇಟ್

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ನಮ್ಮ ಅರಳೇಶ್ವರ

ನೋಡ ಬಾ ನಮ್ಮೂರ ಸಸ್ಯಲೋಕ "

ಡಮಾಮಿ