ಮಳೆನಾಡು ನಮ್ಮೂರು


ಪರವೂರಿನಲ್ಲಿ ನಮ್ಮೂರಿನ ಹೆಸರು.ಭಾಷೆ ಕೇಳಿದ ಕೂಡಲೇ ಕಿವಿ ಒಮ್ಮೆ ನೆಟ್ಟಗೆ ಆಗುವುದು. ಎಲ್ಲರಿಗೂ ಅವರ ಊರು , ಭಾಷೆ ಮೇಲೆ ಅಷ್ಟೊಂದು ಅಭಿಮಾನ ಇರುತ್ತದೆ. ಮಲೆನಾಡು ಅಂತ ಗುರುತಿಸಲ್ಪಡುವ ನಮ್ಮೂರು ಶಿವಮೊಗ್ಗ.

ಮಲೆನಾಡಿನ ಸೊಬಗು ಆ  ಪ್ರಕೃತಿ ಸೌಂದರ್ಯ ಹಚ್ಚ ಹಸಿರಾದ ಕಾಡು, ಸುತ್ತಲೂ ಅಡಿಕೆ ತೋಟಗಳು,  ಭತ್ತದ ಗದ್ದೆಗಳು. ತಂಪಾದ ವಾತಾವರಣ, ಹೆಚ್ಚಿನ ಕಾಡು ಇವು ಇಲ್ಲಿನ ವಿಶೇಷತೆಗಳು. ಕಾಡು ಹೆಚ್ಚು ಇರುವುದರಿಂದ ಮಳೆಯು ಪ್ರಮಾಣ ಹೆಚ್ಚಾಗಿರುತ್ತದೆ . ಮಲೆನಾಡನ್ನು ಮಳೆ ನಾಡು ಅಂತ ಕರೆದವರೂ ಇದ್ದಾರೆ.  ನಮ್ಮೂರಿನಲ್ಲಿ ಮಳೆ ಹೆಚ್ಚು ಬೇಸಿಗೆಯಲ್ಲೂ ಹಿತಕರ ಎನ್ನಿಸುವ ವಾತಾವರಣವೇ ಇರುತ್ತದೆ. ಇನ್ನು ಚಳಿಗಾಲದಲ್ಲಿ  ನಡುಗುವಂತೆ ಅಧಿಕವಾದ ಚಳಿ ಇರುತ್ತದೆ.ಹಾಗೆಯೇ ಇಬ್ಬನಿಯೂ ಹೆಚ್ಚಿರುತ್ತದೆ. ಬೆಳ್ಳಿಗೆ ಹತ್ತು ಗಂಟೆಯವರೆಗೂ ವಾತಾವರಣ ಇಬ್ಬನಿ ಮುತ್ತು  ಪೋಣಿಸಿದಂತೆ ಇರುವುದನ್ನು ನೋಡುವುದೇ ಒಂದು ಹಬ್ಬ. ಹಕ್ಕಿಗಳ ಚಿಲಿಪಿಲಿ, ನಲಿವಿನ  ನಾಟ್ಯ ಮನಸ್ಸಿಗೆ ಮುದ ನೀಡುತ್ತದೆ. ಪ್ರಕೃತಿ ಮಾತೇ ಹಸಿರನ್ನುಟು ಕಂಗೊಳಿಸುತ್ತಿದ್ದಾಳೆ ಇಲ್ಲಿ.

 ಮಾನವನಾಗಿ ಹುಟ್ಟಿದ ಮೇಲೆ ಏನೇನ್ ಕಂಡಿ. 

ಸಾಯೋ ತನಕ ಸಂಸಾರದಲ್ಲಿ  ಗಂಡಾಗುಂಡಿ.

ಹೇರಿಕೊಂಡು ಹೋಗೋದಿಲ್ಲ ಸುತ್ತಾಗ ಬಂಡಿ.

ಇರೋದ್ರೊಳಗೆ ಒಮ್ಮೆ ನೋಡು ಜೋಗದ ಗುಂಡಿ.

 ಎಂಬ ಸುಂದರವಾದ ಸಾಲುಗಳನ್ನು ಹೊಂದಿದ್ದು ಹಾಗೆಯೇ ಮುಂದುವರೆದರಯುವ ಸಾಹಿತ್ಯ ರಚಿಸಿದ್ದು ಮೂಗೂರು ಮಲ್ಲಪ್ಪ ಮನೆ -ಮನೆಗಳಿಗೂ ,ಮನ-ಮನಗಳಿಗೂ ಮುಟ್ಟುವಂತೆ ಹಾಡಿದವರು ನಮ್ಮ ಹೆಮ್ಮೆಯ ಡಾ. ರಾಜ್ ಕುಮಾರ್ . ಇದ್ಯಾಕೆ ಇಲ್ಲಿ ಅಂದರೆ ನಿಜಾ ಸಾಯೋದ್ರೊಳಗೆ ಒಮ್ಮೆ ಈ ಜೋಗವನ್ನು ನೋಡಲೇಬೇಕು. ನಮ್ಮ ಊರಿನಲ್ಲಿ ಇರುವ ವಿಶ್ವ ವಿಖ್ಯಾತ ಜೋಗ ಜಲಪಾತ ಇರುವುದು ಅಂದರೆ ಶರಾವತಿ ನದಿ ಇಲ್ಲಿ ಸುಮಾರು ೮೨೯ ಅಡಿ ಎತ್ತರದಿಂದ ನಾಲ್ಕು ಭಾಗಗಳಾಗಿ ಕೆಳಗೆ ಧುಮುಕುತ್ತದೆ. 

 ಮೊದಲನೆಯದಾಗಿ ರಾಜಗಾಂಭೀರ್ಯದಿಂದ ಧುಮುಕುವ ರಾಜ. ರಾಣಿ ಮೆಂತೆ ವೈಯಾರದಿಂದ ಬಳುಕುತ್ತಾ ಧುಮುಕುವ ರಾಣಿ . ಅಬ್ಬರಿಸುವ ಶಬ್ಧ ದೊಂದಿಗೆ ಧುಮುಕುವ ರೋರರ್ . ಶರವೇಗದೊಂದಿಗೆ ಬಂಡೆ ಕಲ್ಲುಗಳನ್ನು ಸೀಳಿಕೊಂಡು ಮುನ್ನುಗ್ಗುವಂತೆ ಕಾಣುವ ರಾಕೆಟ್.

 ಇವುಗಳ ವೈಭೋಗವನ್ನು ಕಂಡಾಗ ಸ್ವರ್ಗ ವೇ ಧರೆಗಿಳಿದಿದೆ ಅಂತ ಅನ್ನಿಸುವುದರಲ್ಲಿ ಆಶ್ಚರ್ಯ ಇಲ್ಲ. ಮಳೆಗಾಲದಲ್ಲಿ ಜೋಗದ ಸೌಂದರ್ಯವನ್ನು ನೋಡಲು ಕಣ್ಣುಗಳೆರಡು ಸಾಲದು ಹಾಗೆಯೇ ಇದೊಂದು ಪ್ರವಾಸಿ ತಾಣ ಕೂಡ ಹೌದು.

 ಇನ್ನೂ ನಮ್ಮ ಊರಿನಿಂದ ಸ್ವಲ್ಪ ದೂರವಿರುವ ದೂರವಿರುವ ಕೆಳದಿ ಮತ್ತು ಇಕ್ಕೇರಿ ಎಂಬ ಇತಿಹಾಸ ಪ್ರಸಿದ್ಧವಾದ ಸ್ಥಳಗಳು ಹೆಸರನ್ನು ಎಲ್ಲರೂ ಕೇಳಿಯೇ ಇರುತ್ತಾರೆ. ಸಾಗರದಿಂದ ಎಂಟು ಕಿಲೋಮೀಟರ್ ದೂರದಲ್ಲಿ ಕೆಳದಿ ಇದೆ. ಕೆಳದಿ ನಾಯಕರಲ್ಲಿ ಮೊದಲಿಗರು ಚೌಡಪ್ಪ ಎಂಬುವವರು ಕೆಳದಿ ನಾಯಕರಲ್ಲಿ ಶಿವಪ್ಪ ನಾಯಕ ತುಂಬಾ ಪ್ರಮುಖ ನಾದ  ನಾಯಕರಾಗಿದ್ದರು. ಕೆಳದಿ ಸಂಸ್ಥಾನವು ಯಶಸ್ಸಿನ ತುತ್ತ ತುದಿಯನ್ನು ಕಂಡಿದ್ದು ಶಿವಪ್ಪ ನಾಯಕರ ಕಾಲದಲ್ಲಿ ಕೆಳದಿಯಲ್ಲಿ ರಾಮೇಶ್ವರ ದೇವಾಲಯವಿದೆ .ಇಕ್ಕೇರಿ ಮೊದಲಿಗೆ ಕೆಳದಿ ಅರಸರ ರಾಜಧಾನಿಯಾಗಿ ಮೆರೆಯಿತು. ಕೆಳದಿಅರಸರು ಮತ್ತೆ ತಮ್ಮ ರಾಜಧಾನಿಯನ್ನು ಬದಲಾಯಿಸಿದ ಮೇಲು ಇಕ್ಕೇರಿ ತನ್ನ ಪ್ರಾಮುಖ್ಯತೆಯನ್ನು ಕಳೆದುಕೊಳ್ಳಲಿಲ್ಲ. ಗತವೈಭವದ ಸಾಕ್ಷಿಯಾಗಿ ಇಲ್ಲಿ ಉಳಿದಿರುವುದು ಅಘೋರೇಶ್ವರ ದೇವಾಲಯ ಮಾತ್ರ.

ಕೆಳದಿ ಮತ್ತು ಇಕ್ಕೇರಿ ಎಲ್ಲರೂ ನೋಡಬೇಕಾದ ಸ್ಥಳಗಳಾಗಿವೆ. ಅಲ್ಲಿಗೆ ಹೋದಾಗ ಅವುಗಳ ಬಗ್ಗೆ ಹೆಚ್ಚಿನ ವಿಷಯಗಳನ್ನು ತಿಳಿಯಬಹುದಾಗಿದೆ. ಹಲವಾರು ಪ್ರಶಸ್ತಿಗಳನ್ನು  ಮುಡಿಗೇರಿಸಿಕೊಂಡ ಗಿರೀಶ್ ಕಾಸರವಳ್ಳಿ ನಿರ್ದೇಶನದ ದಿವಂಗತ, ಅಭಿನೇತ್ರಿ ಸೌಂದರ್ಯ ನಾಯಕಿಯಾಗಿ ನಟಿಸಿದ ಅತ್ಯುತ್ತಮ ಚಿತ್ರ ಎನ್ನಬಹುದಾದ ದ್ವೀಪ ಸಿನಿಮಾ ಶೇಕಡ 60ರಷ್ಟು ಚಿತ್ರೀಕರಣವು ಈ ಊರಿನಲ್ಲಿಯೇ ನಡೆದಿತ್ತು .ನಮ್ಮೂರಿನ ಪ್ರಕೃತಿ ಸೌಂದರ್ಯವನ್ನು ತುಂಬಾ ಚೆನ್ನಾಗಿ ಚಿತ್ರದಲ್ಲಿ ತೋರಿಸಿದ್ದಾರೆ. 

 ಹಸಿರಿನಿಂದ ಕಂಗೊಳಿಸುವ ಪ್ರಕೃತಿಯನ್ನು ಹೊಂದಿರುವ ಎಲ್ಲರನ್ನೂ ಆಕರ್ಷಿಸುವಂತಹ ಮಲೆನಾಡಿನಲ್ಲಿ  ನಾನು ಹುಟ್ಟಿರುವುದು ನನಗೆ ತುಂಬಾ ಸಂತೋಷವಾಗುತ್ತಿದೆ. ಇಂತಹ ಮಲೆನಾಡಿನ ಸೌಂದರ್ಯವನ್ನು ಒಮ್ಮೆಯಾದರೂ ನೋಡಲೇಬೇಕು. ನೋಡಿ ಸೌಂದರ್ಯವನ್ನು ಕಣ್ ತುಂಬಿಸಿಕೊಳ್ಳಬೇಕು.


✍️ ನಾಗರತ್ನ .ಪಿ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಬೆಳಕು

ನೋಡ ಬಾ ನಮ್ಮೂರ ಸಸ್ಯಲೋಕ "

ಪರಿಸರದ ಮೇಲೆ ಮಾನವನ ದೌರ್ಜನ್ಯ