"ಮಾನವ ಜನ್ಮ ದೊಡ್ಡದು ಇದ ಹಾನಿ ಮಾಡಬೇಡಿ ಹುಚ್ಚಪ್ಪಗಳಿರಾ" ಎಂಬ ಪುರಂದರದಾಸರ ಮಾತು ಸತ್ಯವಾಗಿಯೂ ಪ್ರಸ್ತುತವಾದದ್ದು. ಅದೆಷ್ಟೊ  ಸಾವಿರ ವರ್ಷಗಳಿಂದ ಮನುಷ್ಯತ್ವಕ್ಕೆ ಒಂದು ವಿಶೇಷ ಪ್ರಾಮುಖ್ಯತೆಯನ್ನು ಕೊಡುತ್ತಾ ಬಂದಿರುವ ಸಂಸ್ಕೃತಿ ನಮ್ಮದು. ಮನುಷ್ಯತ್ವ ಕೇವಲ ಕರುಣೆಯೋ ಕಾಳಜಿಯೋ ಖಂಡಿತವಾಗಿ ಅಲ್ಲ ಬಹುಶಃ  ಮನುಷ್ಯತ್ವ ಎಂಬ ಪದಕ್ಕೆ ನಿರ್ದಿಷ್ಟ ಅರ್ಥ  ಕಲ್ಪಿಸಲು ಸಾಧ್ಯವಿಲ್ಲ. ಮನುಷ್ಯತ್ವ ನಮ್ಮ ಒಳಮನಸ್ಸಿನ ಸದ್ಭಾವನೆ.

                 ಮನುಷ್ಯತ್ವದಿಂದ ಒಬ್ಬ ಮನುಷ್ಯನ ಬದುಕಿಗೆ ಬೆಲೆ ನಾವು ತಿಳಿಯಬಹುದೇ ಹೊರತು ಮನುಷ್ಯತ್ವಕ್ಕೆ ಬೆಲೆ ಕಟ್ಟಲು ಎಂದಿಗೂ ಆಗದು. ಇನ್ನೊಬ್ಬರ ಭಾವನೆಗಳಿಗೆ,  ಕಷ್ಟಗಳಿಗೆ, ಸ್ಪಂದಿಸುವ ಮನಸ್ಸು ನಮ್ಮದಾಗಿದ್ದರೆ ಖಂಡಿತವಾಗಿಯೂ ನಮ್ಮಲ್ಲಿನ 'ಮನುಷ್ಯತ್ವ' ಜೀವನದ ಪ್ರತಿ ಸಂದರ್ಭದಲ್ಲೂ ನಮ್ಮನ್ನು ಎಚ್ಚರಿಸುತ್ತ ಬರುತ್ತದೆ.  ಬದಲಾಗುತ್ತಿರುವ ಕಾಲಮಾನದಲ್ಲಿ ಮನುಷ್ಯತ್ವ  ಎಂಬುದು ಗಾಳಿಗೆ ತೂರಿರುವ ತರಗೆಲೆಯಾಗಿರುವುದು  ಖಂಡಿತವಾಗಿ ವಿಷಾದನೀಯ. ಎಲ್ಲೋ  ರಸ್ತೆಯಲ್ಲಿ ಅಪಘಾತ ವಾದದ್ದು ಕಂಡರೆ ನಮಗೇತಕೆ  ಉಸಾಬರಿ? ಎಂದು ಅಲ್ಲಿಂದ ಜಾಗ ಖಾಲಿ ಮಾಡಲು ನೋಡುವ ಮಂದಿ ಒಂದುಕಡೆಯಾದರೆ ಇಂತಹ ಸನ್ನಿವೇಶ ಕಂಡರೆ ಸಾಕು ತಮ್ಮ ಕಿಸೆಯೊಳಗೆ ಕೈ ತುರುಕಿ  ಮೊಬೈಲಿನಲ್ಲಿ ಆ ದೃಶ್ಯವನ್ನು ಸೆರೆಹಿಡಿದು ಸಾಮಾಜಿಕ ಜಾಲತಾಣಗಳಿಗೆ ಹಾಕಲು ತವಕಿಸುವ ಮಂದಿ ಇನ್ನೊಂದು ಕಡೆ. ಇದು ಮನುಷ್ಯತ್ವಕ್ಕೆ ಸವಾಲು ಹಾಕಿ ನಿಂತಿರುವ ರಾಕ್ಷಸತ್ವವೋ ಅಥವಾ ಮನುಷ್ಯತ್ವವೇ ಮೂಲೆಗೆ ಒರಗಿ  ಕೊರಗುತ್ತಿರುವ ಚಿತ್ರಣವೋ  ತಿಳಿಯದು.ಆದರೆ ಒಂದಂತೂ ನಿಜ. ಪ್ರಸ್ತುತ  ಸಮಾಜ ಮನುಷ್ಯತ್ವವನ್ನು ಮೂಲೆಗೆ ಎಸೆದು ತಮ್ಮದೇ ಲೋಕದಲ್ಲಿ ಹಾಯಾಗಿದ್ದಾರೆ.

                   

" ಒಳ್ಳೆಯದನ್ನು ಕಂಡಾಗ ಅನುಸರಿಸು ಕೆಟ್ಟದನ್ನು ಕಂಡಾಗ ಆತ್ಮ ಪರಿಶೀಲನೆ ಮಾಡಿಕೋ" ಎಂದು ಬೈಬಲ್ ನಲ್ಲಿ ಬರುವ ಸಾಲುಗಳು ಇಂದಿನ ಯುವಜನತೆಯ ಕಿವಿ ತಲುಪುತ್ತಲೇ ಇಲ್ಲ. ನಿತ್ಯ ಸಾವಿರ ಮರಗಳನ್ನು ಉರುಳಿಸಿ ಪ್ರಕೃತಿಯ ನರಳಾಟದ ಮಧ್ಯೆಯೇ ಆಧುನೀಕರಣದ ಬೀಜ ಬಿತ್ತುವ ಮನುಷ್ಯನ ಬುದ್ಧಿ ಬೆಳವಣಿಗೆಯಾಗುತ್ತದೆ ಎಂದು ತಿಳಿದರೆ ಖಂಡಿತವಾಗಿಯೂ ಅದು ನಮ್ಮ ಮೂರ್ಖತನ. ಏಕೆಂದರೆ ಮರದ ಬುಡಕ್ಕೆ ಕೊಡಲಿ ಹಾಕುವಾಗ ಆಸರೆಗಾಗಿ ಕಿರುಚುತ್ತಿದ್ದ ಹಕ್ಕಿಗಳ ಕೂಗಾಡಲಿ, ತನ್ನ ಜೀವಕ್ಕಾಗಿ ಹೋರಾಡುತ್ತಿದ್ದ ಮರಗಳ ಒಡಲಾಳದ ನೋವಾಗಲಿ,  ಕಾಡನ್ನೇ ನಂಬಿರುವ ಜನರ ಗೋಳಾಟವಾಗಲಿ ಮನುಷ್ಯನಿಗೆ ತಿಳಿಯಲೇ ಇಲ್ಲ. ಇದೆಲ್ಲವನ್ನು ಗಮನಿಸಿದಾಗ "ಆಧುನಿಕ ಜೀವನದ ಪಾಡು ಮನುಷ್ಯನ ಹೃದಯವನ್ನು ಕದ್ದೊಯ್ದಿದೆ " ಎಂಬ ಮಾತು ಅಕ್ಷರಸಹ ಸತ್ಯ ಸಂಗತಿ ಎನಿಸುತ್ತದೆ.

               ಹಣ ಎಂಬ ಒಂದು ವಸ್ತು ಮನುಷ್ಯನ ಜೀವನ ಮಟ್ಟವನ್ನು ಅದೆಷ್ಟರ ಮಟ್ಟಿಗೆ ಬದಲಾಯಿಸಿದೆ ಎಂದರೆ ಹಣವೊಂದಿದ್ದರೆ ಸಾಕು ಜೀವನದಲ್ಲಿ ಏನನ್ನು ಬೇಕಾದರೂ ಕೊಂಡುಕೊಳ್ಳಬಹುದು ಎಂಬಷ್ಟರಮಟ್ಟಿಗೆ. ಸಾವಿರಾರು ರೂಪಾಯಿ ಖರ್ಚು ಮಾಡಿ "ಒಳ್ಳೆಯ ಜೀವನವನ್ನು ಕೊಡು " ಎಂದು ದೇವರಲ್ಲಿ  ಬೇಡಿಕೊಳ್ಳುವ ನಾವು ನಮ್ಮಲ್ಲಿ ಕಷ್ಟ ಎಂದು ಬಂದವರ ಕಡೆಗಣಿಸಿ ಬಿಡುತ್ತೇವೆ. ನಾವು ಬಾಲ್ಯದಲ್ಲಿದ್ದಾಗ ನಮ್ಮ ಗುರುಗಳು ಹೇಳಿದ ಮಾತಿದು. " ಭೂಲೋಕದಲ್ಲಿ ದೇವರು ತನ್ನ ಸ್ಥಾನವನ್ನು ಮನುಷ್ಯರ ಸದ್ಗುಣಗಳಲ್ಲಿ  ಪ್ರತಿಷ್ಠಾಪನೆ ಮಾಡಿಕೊಂಡಿರುತ್ತಾನಂತೆ " ಹಾಗಿದ್ದರೆ ಮನುಷ್ಯತ್ವ ಯಾರಲ್ಲಿ ಇರುತ್ತದೆಯೋ ಖಂಡಿತವಾಗಿಯೂ ಭಗವಂತ ಅವರನ್ನು ಕಾಯುತ್ತಾನೆ ಮತ್ತು ಕಾಪಾಡುತ್ತಾನೆ.

                   ಬದಲಾದ ಕಾಲ ಶ್ರೀಮಂತಿಕೆಯನ್ನು ಹುಡುಕುವ ದಾಹದಲ್ಲಿ ನಿಜವಾಗಿಯೂ ನೈಜ ಮೌಲ್ಯಗಳನ್ನು ಮರೆತು ಬಡವಾಗಿ ಇಂದಿನ ಜನತೆ ಬದುಕು ನಡೆಸುತ್ತಿದ್ದಾರೆ. ಇನ್ನೊಬ್ಬರ ನೋವಿಗೆ ಮಿಡಿಯುವ ಮನಸ್ಸುಗಳ ಇಂದು ಖಾಲಿಯಾಗುತ್ತಿವೆ. ಕಷ್ಟದಲ್ಲಿರುವವರಿಗೆ ಕನಿಕರಿಸಬೇಕು ಎಂದು ತಿಳಿಯುವ ಜನರಿಗಿಂತ ಕಷ್ಟದಲ್ಲಿರುವವರಿಗೆ ಕನಿಕರಿಸಿ ದ್ದೇವೆ ಎಂದು ತೋರಿಸಿಕೊಳ್ಳುವ ಆಡಂಬರದ ಬದುಕು ನಮ್ಮದಾಗಿದೆ. ಸ್ವಾರ್ಥ, ದುರಾಸೆ,  ಅಹಂಕಾರ, ಅಧಿಕಾರ, ಇದ್ದರೆ ಕಿತ್ತಾಟದ ನಡುವೆ ನಮ್ಮ ಹಿರಿಯರು ಹೇಳಿ ಕೊಟ್ಟಂತಹ ಪ್ರೀತಿ, ವಿಶ್ವಾಸ, ಸಂಸ್ಕಾರ ಮೌಲ್ಯ ಸಂಬಂಧ ಎಂಬ ಮೂಲಗಳನ್ನೇ ನಾವು ಹರಿದು ಹಾಕಿದ್ದೇವೆ. ಕೊಲೆ-ಸುಲಿಗೆ ಪ್ರಾಣಿಹಿಂಸೆ ಪರಿಸರ ನಾಶ ಇವುಗಳನ್ನೇ ಬದುಕಾಗಿಸಿಕೊಂಡ ಇಂದಿನ ಜನತೆಗೆ ಮನುಷ್ಯತ್ವ ಎಂಬ ಪದದ ಅರಿವೇ ಇಲ್ಲ.

                        

     ಮನುಷ್ಯತ್ವ ಎಂದರೆ ನ್ಯಾಯಪರ ವಾದದ್ದು ಎಂಬ ಧೋರಣೆ ಇಂದಿಗೂ ಅನೇಕರ  ಮನಸ್ಸಿನಲ್ಲಿ ಹಾಗೆಯೇ ಇದೆ. ನ್ಯಾಯಪರವಾಗಿರುವುದೇ ಮನುಷ್ಯತ್ವ ಎಂದಾಗಿದ್ದರೆ "ಕ್ಷಮೆ ಶ್ರೇಷ್ಠ ಗುಣ "ಎಂಬ ಮಾತು ಹುಟ್ಟಿಕೊಳ್ಳುತ್ತಲೆ ಇರಲಿಲ್ಲ. ತಪ್ಪು ಎಲ್ಲರೂ ಮಾಡುತ್ತಾರೆ. ಆದರೆ ಪಶ್ಚಾತಾಪ ಎಲ್ಲರೂ ಅನುಭವಿಸುವುದಿಲ್ಲ.

              ಮನುಷ್ಯತ್ವ ನಮ್ಮಲ್ಲಿ ರೂಢಿಗತವಾಗಿ ಬೇಕೆಂದರೆ ನಾವು ಮೊದಲು ಇನ್ನೊಬ್ಬರ ಮನಸ್ಸನ್ನು ಅರ್ಥ ಮಾಡಿಕೊಳ್ಳುವ ಗುಣ ಬೆಳೆಸಿಕೊಳ್ಳಬೇಕು. " ಮನವೇ ನೋವಿನ ಮಾರ್ದನಿ ಮಾತು ಕೇವಲ ಅದರ ಪ್ರತಿಧ್ವನಿ" ಎಂಬ ಮಾತಂತೆ ಇನ್ನೊಬ್ಬರ ಜೊತೆ ನಾವು ಒಡಗೂಡಿದಾಗ ಇನ್ನೊಬ್ಬರ ಜಾಗದಲ್ಲಿ ನಿಂತು ನಾವು ಯೋಚಿಸಿದಾಗ ನಮ್ಮಲ್ಲಿನ ಮನುಷ್ಯತ್ವ ಖಂಡಿತವಾಗಿಯೂ ಜಾಗೃತವಾಗುತ್ತದೆ.ಮತ್ತು ಅದೇ ಮನುಷ್ಯತ್ವ  ನಮ್ಮ ಸುತ್ತಲಿನ ಪ್ರಪಂಚವನ್ನು ನಮ್ಮ ಹೃದಯಕ್ಕೆ ಸನ್ನಿಹಿತವಾಗಿ ಬದುಕನ್ನು ಸುಂದರಗೊಳಿಸುತ್ತದೆ.

     .ಶಿಲ್ಪಾ ಪೂಜಾರಿ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಬೆಳಕು

ನೋಡ ಬಾ ನಮ್ಮೂರ ಸಸ್ಯಲೋಕ "

ಪರಿಸರದ ಮೇಲೆ ಮಾನವನ ದೌರ್ಜನ್ಯ