ಮಡಿ

     ಸೃಷ್ಟಿಯಲ್ಲಿ ಭಗವಂತನು ಎಲ್ಲರಿಗೂ ಸಮಾನತೆಯನ್ನು ನೀಡಿರುವನು. ಉಸಿರಾಡುವ ಗಾಳಿ ,ಜಲ, ಗಿಡಮರಗಳು ಬೆಳಕು ಪ್ರಕೃತಿ ಇವೆಲ್ಲವುಗಳ ಮೇಲೆ ಎಲ್ಲರಿಗೂ ಸಮಾನವಾದ ಹಕ್ಕಿದೆ. ಪ್ರಕೃತಿಯು ಇಷ್ಟೆಲ್ಲಾ ಸಮಾನತೆಯನ್ನು ನೀಡಿದರು ಮನುಷ್ಯನಾದವನು ಮಾತ್ರ ತನ್ನ ಜಾತಿ ಧರ್ಮ ಮತಗಳ ಅಂಧಕಾರದ ಸುಳಿಯಲ್ಲಿ ಸಿಲುಕಿರುವುದು ದುರಂತವೆ ಸರಿ.   

    ಅದು ಹೊಸಪೇಟೆ ಸಮಾಜದಲ್ಲಿ ಎಲ್ಲಾ ಆಯಾಮಗಳಲ್ಲೂ ಉನ್ನತವಾದ ಹಂತದಲ್ಲಿದ್ದ ಒಂದು ವರ್ಗದ ದೀಕ್ಷಾ ಕಾರ್ಯಕ್ರಮವಿತ್ತು. ನಾನು ಹಾಗೂ ನನ್ನ ಮೂರು ಜನ ಸ್ನೇಹಿತರು ಆ ಕಾರ್ಯಕ್ರಮಕ್ಕೆ ಹೋಗಿದ್ದೆವು  ಅತಿಥಿಗಳಗಿ ಅಲ್ಲಾ ,ಕ್ಯಾಟರಿಂಗ್ ಕೆಲಸಕ್ಕಾಗಿ. 

 ಸಾಮಾನ್ಯವಾಗಿ ಊಟ ಎಂದರೆ ಹಸಿದಾಗ ಹೊಟ್ಟೆ ತುಂಬಿಸುವುದಾಗಿದೆ ಅಲ್ಲವೇ? ಆದರೆ ಅಲ್ಲಿ ನಾವು ಬಡಿಸುವ ಊಟಕ್ಕೂ ಮಡಿ ಊಟ ಹಾಗೂ ಹೊರಗಿನ ಊಟ ಎಂಬೆರಡು ವಿಧಗಳು ಇದ್ದವು. ಮನುಷ್ಯರು ತಮ್ಮನ್ನು ಜಾತಿ ಮತ-ಧರ್ಮಗಳ ಆಧಾರದಲ್ಲಿ ವಿಂಗಡಣೆ   ಮಾಡಿಕೊಂಡಿದ್ದಲ್ಲದೆ ಕುಡಿಯುವ ನೀರು, ತಿನ್ನುವ ಅನ್ನಕ್ಕೂ ಜಾತಿ ಭೇದ ಮಾಡುತ್ತಿರುವರು.ಎಂತಹ ದುರಂತ.            

   ಕಾರ್ಯಕ್ರಮಕ್ಕೆ ಬಂದಿದ್ದ ಅತಿಥಿಗಳು ಹೊಟ್ಟೆ ತುಂಬಾ ಊಟ ಮಾಡಿದರು. ಭಾರತೀಯ ಪರಂಪರೆಯಲ್ಲಿ ಮದುವೆ,ಮುಂಜಿ,ದೀಕ್ಷಾ ಕಾರ್ಯಕ್ರಮ ಯಾವುದೇ ಇರಲಿ ಊಟ ಹಾಕಿಸುವುದು ಸರ್ವಶ್ರೇಷ್ಠ ಕಾರ್ಯವಾಗಿದೆ. ಆದರೆ ಇಂದು ಅದು ಪ್ರತಿಷ್ಠೆಯಾಗಿ ಬದಲಾಗಿದೆ.                         

   ಅತಿಥಿಗಳೆಲ್ಲರನ್ನು ಬೀಳ್ಕೊಟ್ಟ ನಂತರ  ಕುಟುಂಬ ಸದಸ್ಯರು ಊಟ ಮಾಡುವ ಸರದಿ. ಆಗಲೇ ಸಮಯ 4 ಗಂಟೆ ಆದ್ದರಿಂದ ಅಲ್ಲೇ ಪಾತ್ರೆ ತೊಳೆಯುಲು ಬಂದಂತಹ ಮೂವರು ವಯಸ್ಸಾದ ಅಜ್ಜಿಯರು ಕೂಡ ದೂರದ ಮೂಲೆಯಲ್ಲಿ ಊಟಕ್ಕೆ ಕುಳಿತರು ಅವರ ಜೊತೆ ಆ ಮನೆಯ ಕಾರ್ ಡ್ರೈವರ್ ಕೂಡ  ಕುಳಿತುಕೊಂಡರು.

      "ನೋಡಿ ಊಟ ಬಡಿಸುವಾಗ ಅವರ ಎಲೆಯನ್ನು ಯಾರು ಕೂಡ ಮುಟ್ಟಕೂಡದು ನಮ್ಮ ಊಟವಾದ ನಂತರ ಅವರಿಗೆ ಬಡಿಸಿ, ಅದು ಎತ್ತರಿಸಿ" ಎಂದು ಕುಟುಂಬದಲ್ಲಿನ ಹಿರಿಯರೊಬ್ಬರು ನಮಗೆ ತಾಕಿತು ಮಾಡಿದರು.        

  "ಅವರು ಕೂಡ ನಮ್ಮ ಹಾಗೆ ಮನುಷ್ಯರಲ್ಲವೇ ಮತ್ತೆ ಅವರಿಗೆ ಯಾಕೆ ಈ ರೀತಿಯ ಪಕ್ಷಪಾತ, ಅಸಹ್ಯ ಪಡುವುದು?"  ನನ್ನ ಸ್ನೇಹಿತನನ್ನು ಪ್ರಶ್ನಿಸಿದೆ "ಮಡಿ ಕಣೋ  ಮಡಿ ಮಡಿಯಾಗಿರಬೇಕು ಅವರ ಎಲೆಗೆ ಕೈ ತಾಕಿದರೆ ಮೈಲಿಗೆ ಯಾಗುವುದು" ಎಂದು ಅಲ್ಲೊಬ್ಬ ಅಡುಗೆಯವನು ನನ್ನನ್ನು  ಗದರಿಸಿದ             

   ಕಾರ್ಯಕ್ರಮದಲ್ಲಿ ಕಸಗುಡಿಸುವವ ಕಸವನ್ನು ಗುಡಿಸಿದರೆ ನೆಲ ಮೈಲಿಗೆ ಆಗುವುದಿಲ್ಲವೇ?  ಅಡುಗೆ ಪಾತ್ರೆಯನ್ನು ತೊಳೆಯುವಾಗ ಮೈಲಿಗೆ ಆಗುವುದಿಲ್ಲ, ಆದರೆ ಅವರನ್ನು ಪಕ್ಕಕ್ಕೆ ಕೂರಿಸಿಕೊಂಡು ಊಟ ಮಾಡಿದರೆ , ಅವರ ಊಟದ ಎಲೆಯನ್ನು ಮುಟ್ಟಿದರೆ ನಮ್ಮ ಮಡಿಗೆ ಭಂಗವಾಗುವುದೇ? ಇಂತಹ ಮಡಿಗೆ ನನ್ನ ಧಿಕ್ಕಾರ. 

   ತಾನು ಕೊಡುವ ಬೆಳಕು ದಲಿತ ಜನರಿಗೆ ಸೋಕಿದರೆ, ನನ್ನ ಗಾಳಿ ನೀರು ದಲಿತ ಜನರು  ಉಸಿರಾಡಿದರೆ,ಕುಡಿದರೆ ಅದು ಮೈಲಿಗೆ ಯಾಗುವುದು ಎಂದು ಯಾವತ್ತೂ ಪ್ರಕೃತಿ ಅಂದುಕೊಂಡಿಲ್ಲ. ಪ್ರಕೃತಿಗೆ ಇರದ ಜಾತಿ ಧರ್ಮ ನಮಗ್ಯಾಕೆ ಸ್ವಾಮಿ.  

     ಕೇವಲ ಪ್ರತಿಷ್ಠೆ, ಹೆಸರಿಗಾಗಿ ನಾಲ್ಕು ಜನರ ಮುಂದೆ ನಾವೆಲ್ಲರೂ ಒಂದು ಎಂದು ಹೇಳುವ ನಾವುಗಳು ಇದನ್ನು ನಿಜವಾಗಿಯೂ ಅನುಸರಿಸಿದರೆ ಎಷ್ಟು ಚೆಂದ ."ಹಸಿದವರಿಗೆ ಅನ್ನವನ್ನು ನೀಡಬೇಕೆ ಹೊರತು ವೇದಾಂತವನ್ನಲ್ಲ"ಎಂಬ ಸ್ವಾಮಿ ವಿವೇಕಾನಂದರ ನುಡಿಯಂತೆ ನಾವೆಲ್ಲರೂ ನಡೆಯೋಣ.

  

--ಹೆಚ್. ಏಮ್ ಕಾರ್ತಿಕ್

ಪತ್ರಿಕೋಧ್ಯಮ ವಿಭಾಗ,

ಎಂ. ಎಂ ಕಲಾ ಮತ್ತು ವಿಜ್ಞಾನ ಕಾಲೇಜು ಶಿರಸಿ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ನಮ್ಮ ಅರಳೇಶ್ವರ

ಡಮಾಮಿ

ಗುಡಿಗಾರ ಸಮಾಜ