ಮಳೆಗಾಲದ ಆ ದಿನಗಳು
ಮಳೆಗಾಲ ಅಂದ್ರೆನೇ ಒಂಥರಾ ಮಜಾ. ಮಳೆಗಾಲ ಬರ್ಲಿ ಅಂತಾನೆ ಕಾಯ್ತಾ ಇರುವಂತಹ ರೈತರು, ಈಗ ಈಗಾ ಕಾಲೇಜು ಮೆಟ್ಟಿಲನ್ನ ಹತ್ತಿರುವಂತಹ ಹುಡುಗ್ರು. ಇವ್ರೆಲ್ಲಾ ಇದಕ್ಕಾಗಿಯೇ ಕಾಯ್ತಾ ಇರ್ತಾರೆ. ರೈತರು ಮಳೆ ಬರ್ಲಿ ಬೆಳೆ ಬೆಳೆಯೋಣ ಅಂತಾ ಕಾಯ್ತಿರ್ತಾರೆ ಆದ್ರೆ ನಮ್ ಹುಡುಗರು ಮಳೆ ಬಂದ್ರೆ ಅದರಲ್ಲೂ ಮಲೆನಾಡಿನವರು ಅಂತೂ ಬೈಕ್ ತಗೊಂಡು ಸ್ನೇಹಿತರ ಜೊತೆ ಬೆಟ್ಟ ಗುಡ್ಡ ಹತ್ತೋಕೆ, ಒಳ್ಳೊಳ್ಳೆ ಪಾಲ್ಸ್ ನೋಡೋಕೆ ಅಂತಾನೆ ರೆಡಿ ಆಗಿ ನಿಂತಿರ್ತಾರೆ. ಮಳೆಗಾಲದ ಸಮದಯಲ್ಲಿ ನಮ್ಮ ಹಳ್ಳಿ ಕಡೆ ಇರಬೇಕು ಆ ಜೀವನಾ ಅನುಭವಿಸಬೇಕು ಒಂಥರಾ ಸ್ವರ್ಗಕ್ಕೆ ಇನ್ನೊಂದೆ ಮೆಟ್ಟಿಲು ಇರುವ ಹಾಗೆ ಅನುಭವವಾಗುತ್ತದೆ.
ಮುಗಿಲಿಗೆ ತೂತು ಬಿದ್ದಿರುವ ಹಾಗೆ ಮನೆಯಿಂದ ಹೊರಗಡೆ ಕಾಲಿಡೊದಕ್ಕೂ ಸಾಧ್ಯ ಆಗೋದಿಲ್ಲ ಅಂತಹ ರಭಸವಾಗಿ ಬೀಳುವ ಮಳೆ. ಕೆರೆ ಹಳ್ಳ ಕೊಳ್ಳಗಳೆಲ್ಲಾ ತುಂಬಿ ಉಕ್ಕಿ ಹರಿಯುತ್ತಾ ಇರುತ್ತವೆ. ಈ ಕಾಲದಲ್ಲಿ ಇಲ್ಲಿ ಒಂದಿಷ್ಟು ವಿದವಿಧವಾದ ಆಹಾರಗಳನ್ನು ಸವಿಯಬಹುದು. ಕಳಲೆ, ಅಣಬೆ, ಏಡಿ ಮತ್ತು ಜಬ್ಬು ಮೀನು ಹೀಗೆ ಹಲವಾರು ದೊರೆಯುತ್ತದೆ. ಇವುಗಳ ರುಚಿಯಂತು ಅದನ್ನು ವರ್ಣಿಸಲಾಗದು. ಹಲವಾರು ಮಂದಿ ಇದಕ್ಕಾಗಿಯೇ ಕಾಯ್ದು ಕೂತಿರುತ್ತಾರೆ. ಇಂತಹ ವಿಶೇಷವನ್ನು ಎಲ್ಲೆಡೆ ನೋಡಲು ಸಾಧ್ಯವಿಲ್ಲ ಅದು ಮಲೆನಾಡಿನಲ್ಲಿ ಮಾತ್ರಾ ದೊರೆಯುತ್ತದೆ. ಮಲೆನಾಡಿನಲ್ಲಿ ಹುಟ್ಟಬೇಕೆಂದರೆ ಪುಣ್ಯ ಮಾಡಿರಬೇಕು ಎಂದು ಹೇಳುವುದಂತು ಸತ್ಯದ ಮಾತು.
ಮಲೆನಾಡಿನ ಹೆಬ್ಬಾಗಿಲು ಎಂದೇ ಪ್ರಸಿದ್ಧಿಯಾಗಿರುವ ನಮ್ಮ ಶಿರಸಿ. ಇಲ್ಲಿನ ಜನರಂತೂ ಇನ್ನು ಅದೃಷ್ಟವಂತರು ಎನ್ನಬಹುದು. ಇಲ್ಲಿರುವಂತಹ ಜನರು ಎಷ್ಟು ನಿರ್ಭಿತಿಯಿಂದ ಜೀವನ ನಡೆಸುತ್ತಾರೆಂದರೆ ಎಂತಹ ಮಳೆ ಬಂದರೂ ಕೂಡಾ ಇಲ್ಲಿನ ಜನರಿಗೆ ತೊಂದರೆ ಇಲ್ಲಾ. ಮನೆ ಕೊಚ್ಚಿಕೊಂಡು ಹೋಗುವುದು, ಊರಿಗೆ ಊರೇ ಮುಳುಗುವ ಸಂದಿಗ್ದ ಪರಿಸ್ಥಿತಿಯಂತು ನಮಗೆ ಬರುವುದಿಲ್ಲ. ಭೀಕರ ಬರಗಾಲ ಸೃಷ್ಟಿಯಾದರೂ ಕುಡಿಯುವ ನೀರಿಗೇನು ತೊಂದರೆಯಿಲ್ಲ ಆದ್ದರಿಂದ ಇಲ್ಲಿ ಸಂಸಾರವನ್ನು ಹೂಡಿದವರು ಸುಖಮಯಿಗಳು.
ಮಳೆಗಾಲದಲ್ಲಿ ಇಲ್ಲಿನ ಗುಡ್ಡ ಗಾಡು ಪ್ರದೇಶಗಳನ್ನು ಹತ್ತಿ ಪ್ರಕೃತಿಯ ಸೌಂದರ್ಯವನ್ನು ನೋಡುವುದೇ ಒಂದು ರೀತಿಯ ಆನಂದ. ಬೆಳ್ಳಂ ಬೆಳಗ್ಗೆ ಎದ್ದು ಇಲ್ಲಿನ ಜಲಪಾತಗಳನ್ನು ನೋಡ ಹೊರಟರೆ ಮಸುಕಾದ ರಸ್ತೆಗಳು , ಜಲಪಾತಗಳಿಂದ ಧುಮುಕುವ ನೀರಿನ ಹನಿಗಳು ಮೈಯಿಗೆ ತಾಕಿದರೆ ನೋಡುಗರ ಮನಸ್ಸಿಗೆ ಮುದ ನೀಡುವುದಂತು ಸತ್ಯ. ಮಲೆನಾಡಿನ ಭಾಗವಾದ ಶಿರಸಿಗೆ ಶಿರಸಿ ಎಂದು ಹೆಸರು ಹೇಗೆ ಬಂತೆಂದರೆ, ಇಲ್ಲಿಂದ ಹೊರಡುವ ಪ್ರತಿಯೊಂದು ಮಾರ್ಗಗಳು ಕೂಡಾ ಇಳಿಮುಖವಾಗಿದೆ. ಇದು ಶಿಖರದಂತೆ ಮೇಲೆ ಎದ್ದು ನಿಂತಿದೆ ಬಹುಶಃ ಇದರಿಂದ ಶಿರಸಿ ಎಂದು ನಾಮಕರಣ ಮಾಡಿರಲೂ ಬಹುದು.
ಇಂದಿನ ದಿನಮಾನದಲ್ಲಿ ಜನರ ಆಸೆಗೆ ಮಿತಿಯಿಲ್ಲದಂತಾಗಿದೆ ಎಷ್ಟೇ ಸಂಪತ್ತು ಇದ್ದರು ಸಾಲದಾಗಿದೆ. ಹಾಗೆ ಅವರವರ ಸ್ವಾರ್ಥದ ಬದುಕಿಗೆ ಗಿಡ ಮರಗಳ ನಾಶವಂತು ಹೇಳಲಾಗದಷ್ಟು ಕ್ಷೀಣಿಸುತ್ತಿದೆ. ಹೀಗೆ ಮುಂದುವರೆದರೆ ಮುಂದಿನ ಪೀಳಿಗೆ ಜನರು ಜೀವನ ಸಾಗಿಸುವುದು ಬಹಳ ಕಷ್ಟ ಸಾಧ್ಯವಾಗಿದೆ...
ಸುದೀಪ ರವಿ ಮಾಳಿ.
ಪತ್ರಿಕೋದ್ಯಮ ವಿಭಾಗ.
ಎಂ ಎಂ ಕಲಾ ಮತ್ತು ವಿಜ್ಞಾನ ಕಾಲೇಜು,ಶಿರಸಿ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ