ಹುಟ್ಟು ಶಾಪವಾದರೇನು? ಬದುಕು ವರವಾಗಲಿ.


"ನನ್ನಲ್ಲಿ ಹಣವಿಲ್ಲ, ನಾನು ಬಡವ, ನಾನೂ ಶ್ರೀಮಂತನಾಗಿದ್ದರೆ ಇಂದು ಕಷ್ಟವೇ ಬರುತ್ತಿರಲಿಲ್ಲ.ನನ್ನ ಕುಟುಂಬ ಸರಿಯಿಲ್ಲ. ನಾನು ದುರದೃಷ್ಟ ವ್ಯಕ್ತಿ . ನಾನು ಏನೇ ಮಾಡಿದರೂ ಅದು ಸಾಧ್ಯವಾಗುವುದಿಲ್ಲ.ನನ್ನಲ್ಲಿ ಅದಿರಬೇಕಿತ್ತು. ಇದಿರಬೇಕಿತ್ತು " ಒಂದೇ ಎರಡೇ?.ತಮ್ಮನ್ನು ತಾವು ಸಮರ್ಥನೆ ಮಾಡಿಕೊಳ್ಳಲು ಇಂದು ಅದೆಷ್ಟೋ ಜನ ಇಂತಹ ಹಲವು ನೆಪಗಳಿಗೆ ತಾವೇ ಶರಣಾಗುತಿದ್ದಾರೆ. ಅದೆಷ್ಟೋ ಸಮಸ್ಯೆಗಳನ್ನು ಎದುರಿಸಲಾರದೇ ಬದುಕ ಬಂಡಿಯಲ್ಲಿ ಜರ್ಜರಿತರಾಗುತ್ತಿದ್ದಾರೆ. ಮನಸ್ಸನ್ನು ಚಿಂತೆಯ ಗೂಡಾಗಿಸಿಕೊಂಡು ಹೊರಬರಲಾರದೇ ಚಡಪಡಿಸುತಿದ್ದಾರೆ.ಲೆಕ್ಕವಿಲ್ಲದಷ್ಟು ಜನ ಸಾವಿನಲ್ಲಿ ಸಮಸ್ಯೆಗೆ ವಿದಾಯ ಹೇಳುತಿದ್ದಾರೆ. 

                ಮನುಷ್ಯನೆಂಬುವವ ಅಸಾಧ್ಯವಾದದ್ದನ್ನು ಸಾಧಿಸಿ ತೋರಿಸುವ ಶಕ್ತಿ ಹೊಂದಿದಾತ.ಕೆಲವೊಮ್ಮೆ ಅವನನ್ನು ಸಮಸ್ಯೆಗಳು ಪಾತಾಳಕ್ಕೆ ತಳ್ಳುತ್ತವೆ.ಪರಿಸ್ಥಿತಿ ಗಳ ಸರಪಳಿಯಿಂದ ಕಟ್ಟಿ ಹಾಕುತ್ತದೆ.ಆದರೆ ಅವೆಲ್ಲವನ್ನೂ ಮೀರಿ ನಡೆದವ ಮಾತ್ರ ಸಾಧಕನೆನಿಸಿಕೊಳ್ಳುತ್ತಾನೆ.ಆದರೆ ಸಾಧನೆಗೆ ಮುಖ್ಯವಾಗಿ ಬೇಕಾದದ್ದು. ಕಠಿಣ ಶ್ರಮ. ಹಾಗೂ ನಿರಂತರ ಹೋರಾಟ. 

     

                  "ಅದೃಷ್ಟವೆಂಬುದು ಹಣೆಯ ಬರಹದಲ್ಲಿ ಇಲ್ಲ.ಅಂಗೈ ರೇಖೆಯಲ್ಲೂ ಇಲ್ಲ.ಅದಿರುವುದು ಪ್ರಯತ್ನದಲ್ಲಿ ಮಾತ್ರ "ಎಂಬ ಅಂಬೇಡ್ಕರರ ವಾಣಿ ನಿಜವಾಗಿಯೂ ಮೆಚ್ಚುವಂತಹದು.ಮಾಡಬೇಕಾದ ಕಾರ್ಯದ ತಿಳುವಳಿಕೆ, ಆಂತರಿಕ ಶಿಸ್ತು,ಅನುಕೂಲಕರ ವಾತಾವರಣದ ಸೃಷ್ಟಿ, ನಿರಂತರ ಅಭ್ಯಾಸ ಇವೆಲ್ಲವೂ ಕೂಡ ಯಶಸ್ಸಿನ ದಡ ಮುಟ್ಟಿಸುತ್ತದೆ."ನಾಳೆ ಮಾಡುವ ಕೆಲಸ ಇಂದೇ ಮಾಡು,ನಾಳೆ ಎನ್ನುವ ಮಾತ ಮುಂದೆ ದೂಡು "ಎನ್ನುವ ಜನಪ್ರಿಯ ಮಾತು ಗುರಿಯತ್ತ ಸಾಗುವ ಮನಸುಗಳಿಗೆ ಸಮಯದ ಸದ್ಭಳಕೆಯ ಬಗ್ಗೆ ಉಪದೇಶಿಸುತ್ತದೆ."ನಿನ್ನ ಭವಿಷ್ಯದ ಶಿಲ್ಪಿ ನೀನೇ "ಎಂಬ ಸ್ವಾಮಿ ವಿವೇಕಾನಂದರ ಮಾತುಗಳು ಇಂದಿಗೂ ಯುವಜನತೆಗೆ ಸ್ಫೂರ್ತಿಯ ಚಿಲುಮೆಯೇ. 

  

        "ಸಾಧನೆಗೆ ಅಸಾಧ್ಯವಾದದ್ದು ಯಾವುದೂ ಇಲ್ಲ"ಇದು ನಾರದರು ಧ್ರುವನಿಗೆ ಉಪದೇಶಿಸಿದ ಮಾತು.ನಾನು ಅಸಮರ್ಥ ಎಂದು ನಿರ್ಣಯಕ್ಕೆ ಬರುವ ಮೊದಲು ಕಷ್ಟಗಳ ಗೋಡೆಯನ್ನು ಮೆಟ್ಟಿ ನಿಂತ ಮಹಾನ್ ಸಾಧಕರನ್ನು ಒಮ್ಮೆಯಾದರೂ ನೆನೆಸಿಕೊಳ್ಳಬೇಕು.ಪುರಾಣ ಕಾಲದ ಕೃಷ್ಣ,  ಏಕಲವ್ಯನಿಂದ ಹಿಡಿದು, ಇತಿಹಾಸದ ಅಶೋಕ, ಶಿವಾಜಿ, ಮೈಸೂರು ಒಡೆಯರವರೆಗೆ,ಕಲಾಂ,ವಾಜಪೇಯಿ ಅವರಿಂದ ಹಿಡಿದು ರಾಜಕುಮಾರ್ ಸುಧಾ ಮೂರ್ತಿಯವರೆಗೆ ಎಲ್ಲರೂ ಕೂಡ ಜೀವನದ ಒಂದಲ್ಲ ಒಂದು ಹಂತದಲ್ಲಿ ಎಡವಿ ಬಿದ್ದವರೇ.ಆದರೆ ನಮ್ಮ ಬದುಕು ಹೀಗೆ ಎಂದು ಕೊರಗದೇ ತಮ್ಮನ್ನು ತಾವೇ ಸಾಧನೆಗೆ ಸಜ್ಜು ಮಾಡಿಕೊಂಡವರಲ್ಲವೇ? ಬದುಕ ಯುದ್ಧದಲ್ಲಿ ಶಸ್ತ್ರವಿದ್ದು ಹೋರಾಡುವವನಿಗಿಂತ ಶಸ್ತ್ರವಿಲ್ಲದೆ ಪ್ರಯತ್ನದಿಂದ ಗೆಲ್ಲುವವ ಮಾತ್ರ ಸ್ಫೂರ್ತಿಯಾಗಬಲ್ಲ ಎಂಬ ಮಾತು ನಿಜವೇ ಅಲ್ಲವೆ? 

     

          ಯಾರಿಗೂ ಕೂಡ ಗೆಲುವು ಉಚಿತವಾಗಿ ಬರುವುದಿಲ್ಲ.ಗೆಲ್ಲುತ್ತೇನೆಂದು ಬಂದವ ಮೊದಲು ಸೋಲುವುದಕ್ಕೆ ಸಿದ್ದನಿರಬೇಕು.ಒಮ್ಮೆ ಸೋತರೆ "ಮರಳಿ ಯತ್ನವ "ಮಾಡಬೇಕು.ಪದೇ ಪದೇ ಅಭ್ಯಾಸದ ಪುನರಾವರ್ತನೆಯು ದಡ್ಡನನ್ನು ಜಾಣನಾಗಿಸಬಲ್ಲದು.ಕಾಲಚಕ್ರ ಎಂದಿಗೂ ಒಂದೇ ರೀತಿ ಇರುವುದಿಲ್ಲ.ಬಿಡುವಿಲ್ಲದೇ ಪಡುವ ಶ್ರಮಕ್ಕೆ ಸೋಲು ಶರಣಾಗಬೇಕು.ಹುಟ್ಟು ಶಾಪವಾದರೂ ಬದುಕು ಇನ್ನೊಬ್ಬರಿಗೆ ಸ್ಫೂರ್ತಿಯಾಗಬೇಕು.


        ಶಿಲ್ಪಾ ಪೂಜಾರಿ 

        BA 1 st

        ಪತ್ರಿಕೋದ್ಯಮ ವಿಭಾಗ 

        ಎಂ. ಎಂ. ಮಹಾವಿದ್ಯಾಲಯ ಶಿರಸಿ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ನಮ್ಮ ಅರಳೇಶ್ವರ

ಡಮಾಮಿ

ನೋಡ ಬಾ ನಮ್ಮೂರ ಸಸ್ಯಲೋಕ "