ಯುಗಾದಿ


 ಭಾರತವು ಸಾಂಸ್ಕೃತಿಕ ಹಿನ್ನೆಲೆ ಹೊಂದಿದ್ದ ರಾಷ್ಟ್ರ . ಇಲ್ಲಿ ಹಬ್ಬ ಹರಿ ದಿನಗಳಿಗೆ ಕೊರತೆಯೇನಿಲ್ಲ. ಮನಸ್ಸುಗಳ ಭಾವಗಳನ್ನು ಬಂಧಿಸುವ ಸಂತಸ,ಸಡಗರದ ದಿನಗಳನ್ನು ನಾವಿಲ್ಲಿ ಕಾಣಬಹುದು. ಅಂತಹ ಹಬ್ಬಗಳಲ್ಲಿ ಒಂದು ಯುಗಾದಿ. 


                    ಯುಗಾದಿ ಹಿಂದೂ ಸಂಪ್ರದಾಯದಂತೆ ಹೊಸ ವರ್ಷದ ಆರಂಭಗೊಳ್ಳುವ ದಿನ. ಈ ಹಬ್ಬವನ್ನು ದೇಶದಾದ್ಯಂತ ವಿವಿಧ ಹೆಸರುಗಳಲ್ಲಿ ಆಚರಣೆ ಮಾಡಲಾಗುತ್ತದೆ. ಈ ಹಬ್ಬವು ಹೊಸ ಯುಗದ ಆರಂಭ ಮತ್ತು ಸುದ್ದಿಯ ಸಮಯವನ್ನು ಸಂಕೇತಿಸುತ್ತದೆ. 

                    ಕರ್ನಾಟಕ, ತೆಲಂಗಾಣ ಮತ್ತು ಆಂಧ್ರಪ್ರದೇಶಗಳಲ್ಲಿ ಈ ಹಬ್ಬವು ಜನಪ್ರಿಯವಾಗಿದೆ. ಈ ಹಬ್ಬಕ್ಕೆ ಅದರದೇ ಆದ ಪೌರಾಣಿಕ ಹಿನ್ನೆಲೆಯೂ ಇದೆ. ಬ್ರಹ್ಮನು ಜಗತ್ತನ್ನು ಸೃಷ್ಟಿ ಮಾಡಿದ ದಿನವೆಂದು ಶ್ರೀರಾಮಚಂದ್ರನು ರಾವಣನ ಮೇಲೆ ಜಯ ಸಾಧಿಸಿದ ಕಷ್ಟದ ದಿನಗಳನ್ನೆಲ್ಲ ಕಳೆದು ಸೀತಾ ಮಾತೆ ಲಕ್ಷ್ಮಣನೊಂದಿಗೆ ಅಯೋಧ್ಯೆಗೆ ಬಂದ ದಿನವೆಂದು ಹಾಗೂ ಸೋಮಕಾಸುರ ಎಂಬ ರಾಕ್ಷಸನು ವೇದಗಳನ್ನು ಚಾಪೆಯಂತೆ ಸುತ್ತಿ ಕೊಂಡೊಯ್ದು ಸಾಗರದ ಆಳದಲ್ಲಿ ಮುಚ್ಚಿಟ್ಟಿದ್ದರಿಂದ ಮಹಾ ವಿಷ್ಣು ತನ್ನ ಮೊದಲ ಅವತಾರವಾದ ಮತ್ತ್ಯಾವತಾರದಲ್ಲಿ ಹೋಗಿ ಆ ವೇದಗಳನ್ನು ತಂದು ಬ್ರಹ್ಮನಿಗೆ ಕೊಟ್ಟ ದಿನವೆಂದು, ಅನಂತರ ಬ್ರಹ್ಮನು ಸೃಷ್ಟಿಕಾರ್ಯ ಆರಂಭ ಮಾಡಿದನೆಂದು ಪುರಾಣದ ಐತಿಹ್ಯ ಇದೆ. ಇಂಥ ಹಲವು ಶುಭಾರಂಭಗಳಿಂದ ಯುಗಾದಿ ಆಚರಣೆ ಬಂದಿದೆ. 

                      ಹಬ್ಬದ ಮುನ್ನ ದಿನದಂದು ಮನೆಗಳನ್ನು ಸ್ವಚ್ಛಗೊಳಿಸುವುದು ಮತ್ತು ದೇವತೆಗಳ ಅಲಂಕಾರಗಳನ್ನು ಮಾಡುತ್ತಾರೆ ಮತ್ತು ಸಿಹಿ ಖಾರ ಹುಳಿ ಇತ್ಯಾದಿ ಭಕ್ಷ್ಯಗಳನ್ನು  ತಯಾರಿಸುತ್ತಾರೆ. 

                       ಇಂತಹ ಸಂಭ್ರಮದ ನೆಪವನಿಟ್ಟುಕೊಂಡು ಊರಿನ ಮಕ್ಕಳು, ಹೆಂಗಸರು ಹೊಸ ಬಟ್ಟೆ ಧರಿಸಿಕೊಳ್ಳಲು, ಆಭರಣ ಧರಿಸಿಕೊಳ್ಳಲು ಹಬ್ಬವು ಒಂದು ಅವಕಾಶ ಮಾಡಿಕೊಡುತ್ತದೆ. 

                       ಪಕ್ಷಿಗಳಲ್ಲಿ ನವಿಲು, ಪ್ರಾಣಿಗಳಲ್ಲಿ ಮಾನವ, ಋತುಗಳಲ್ಲಿ ವಸಂತ ಋತು ಶ್ರೇಷ್ಠವಾದಂತೆ ಎಲ್ಲಾ ಹಬ್ಬಗಳಲ್ಲಿ ಯುಗಾದಿಯು ಶ್ರೇಷ್ಠ. ಇದು ಚೈತ್ರ ಮಾಸದ ಶುಕ್ಲ ಪಕ್ಷದ ಪಾಡ್ಯದಂದು ಬರುತ್ತದೆ. ಹೊಸ ವರ್ಷದ ಪ್ರಾರಂಭದ ಸಂಕೇತವಾದ ಯುಗಾದಿಯನ್ನು ಬಡವ ಬಲ್ಲಿದರೆಂಬ ತಾರತಮ್ಯವಿಲ್ಲದೆ ಎಲ್ಲಾ ಹಿಂದೂಗಳು ಆಚರಿಸುತ್ತಾರೆ . 

                        ಈ ಸಮಯದಲ್ಲಿ ಪ್ರಕೃತಿಯು ತಾಜಾ ಹೂಗಳು ಮತ್ತು ಹಸಿರಿನಿಂದ ಕೂಡಿರುತ್ತದೆ. ವಸಂತ ಕಾಲದ ಆಗಮನದೊಂದಿಗೆ ಪ್ರಕೃತಿಯಲ್ಲಿ ಎಲ್ಲವೂ ಸಂತೋಷದಿಂದ ಕಾಣುತ್ತದೆ. ಇದಲ್ಲದೆ ಜನರು ಬೆಲ್ಲ ಮತ್ತು ಬೇವಿನ ಎಲೆಗಳನ್ನು ಸಮಾನ ಪ್ರಮಾಣದಲ್ಲಿ ಹಂಚಿ ತಿನ್ನುತ್ತಾರೆ. ಬೇವು - ಬೆಲ್ಲದ ಮಿಶ್ರಣವನ್ನು ತಿನ್ನುವಾಗ ಹೇಳುವ ಶ್ಲೋಕ ಹೀಗಿದೆ.                 

                        ಶತಾಯ ವಜ್ರದೇಹಾಯ

                        ಸರ್ವಸಂಪತ್ಕ ರಾಯಚ

                        ಸರ್ವಾರಿಷ್ಟ ವಿನಾಶಾಯ ನಿಂಬಕಂದಳ ಭಕ್ಷಣಂ ll

                        

  ಇದರರ್ಥ ನೂರು ವರುಷಗಳು ಆಯುಷ್ಯ, ಸದೃಢ ಆರೋಗ್ಯ , ಸಕಲ ಸಂಪತ್ತುಗಳ ಪ್ರಾಪ್ತಿಗಾಗಿಯೂ ಸಕಲ ಅರಿಷ್ಟ ನಿವಾರಣೆಗಾಗಿಯೂ ಬೇವು ಬೆಲ್ಲ ಸೇವನೆ ಮಾಡುತ್ತಾರೆ. 

                          ಇವನ್ನೆಲ್ಲ ಗಮನಿಸಿದರೆ ನಮ್ಮ ಸಂಸ್ಕೃತಿ, ಸಂಪ್ರದಾಯ ಸಂಪ್ರದಾಯ, ಆಚರಣೆಗಳು ಯಾವ ಪಥದಲ್ಲಿ ಸಾಗುತ್ತದೆ ಎಂಬುದನ್ನು ತಿಳಿಸುತ್ತದೆ . 

                                                                     

                                        ಮಹಾಲಕ್ಷ್ಮಿ ಮರಾಠಿ

                                  ಎಂ ಎಂ ಮಹಾವಿದ್ಯಾಲಯ ಶಿರಸಿ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ನಮ್ಮ ಅರಳೇಶ್ವರ

ನೋಡ ಬಾ ನಮ್ಮೂರ ಸಸ್ಯಲೋಕ "

ಡಮಾಮಿ