ನಾನು ಹುಟ್ಟಿ ಬೆಳೆದದ್ದು ಎಲ್ಲದೂ ಹಳ್ಳಿಯಲ್ಲಿ. ನಾವೇನು ಹೇಳುವಷ್ಟು ಶ್ರೀಮಂತರಲ್ಲ ಮಧ್ಯಮವರ್ಗದವರು. ನಮ್ಮದೇ ಆದ ಸ್ವಂತ ಸ್ವಲ್ಪ ತೋಟ ಹಾಗೂ ಗದ್ದೆಯನ್ನು ನನ್ನಪ್ಪ ಹೊಂದಿದ್ದರು.

         ಸುಮಾರು ಏಳು ಎಂಟು ವರ್ಷಗಳ ಹಿಂದಿನ ಘಟನೆದು. ಆಗ ನಮ್ಮೂರಿನಲ್ಲಿ ಟ್ಯಾಕ್ಟರ್ ನಂತರ ಯಾವುದೇ ರೀತಿಯ ಉಪಕರಣಗಳಿರಲಿಲ್ಲ. ಎಲ್ಲರೂ ಎತ್ತಿನ ಸಹಾಯದಿಂದ ನೇಗಿಲನ್ನು ಬಳಸಿ ಉಳುಮೆಯನ್ನು ನಡೆಸುತ್ತಿದ್ದರು.ಆಗಿಲ್ಲ ನಮಗೆ ಮಳೆಗಾಲ ಶುರುವಾಗುವ ಜೂನ್ ತಿಂಗಳು ಎಂದರೆ ತುಂಬಾ ಅಚ್ಚು ಮೆಚ್ಚು.ಆ ವೇಳೆಗೆ ಮೊದಲ ಮಳೆ ಆಗುವಾಗ ನಮ್ಮೂರಿನಲ್ಲಿ ಕೋಳಿ ಹಬ್ಬ ಆಚರಿಸುವರು. ಇದೇ ವೇಳೆಗೆ ಗದ್ದೆ ಅಕ್ಕ-ಪಕ್ಕದಲ್ಲಿದ್ದ ಹಳ್ಳಗಳ ಮೀನು, ಎಡಿಗಳೆಲ್ಲವೂ ಗದ್ದೆಗೆ ಬರುತ್ತಿದ್ದವು. 

          ಆಗೆಲ್ಲ ಈಗಿನ ತರ ಕೊಡೆ ಅಥವಾ ರೇನ್ಕೋಟನ್ನು ಅಷ್ಟಾಗಿ ಬಳಸುತ್ತಿರಲಿಲ್ಲ. ಅದರ ಬದಲಾಗಿ ಪ್ಲಾಸ್ಟಿಕ್ ಕೋಳಿಗೆಯನ್ನು ಧರಿಸಿ ಮೀನನ್ನು ಹಿಡಿಯಲು ನಾವೆಲ್ಲ ಊರಿನ ಸಣ್ಣ ಮಕ್ಕಳು ಹೋಗುತ್ತಿದ್ದೆವು ಒಂದು ಬೆಳಗ್ಗೆ ತಿಂಡಿ ತಿಂದು ಎಲ್ಲರೂ ಒಟ್ಟಿಗೆ ಹೊರಟರೆ ಕತ್ತಲಾಗುವ ವೇಳೆಗೆ ಮನೆಗೆ ಮರಳುತ್ತಿದ್ದೆವು. ಮಳೆ ಚಳಿ ಹಸಿವು ಏನನ್ನು ಲೆಕ್ಕಿಸದೆ ಮೀನು ಹಿಡಿಯುವುದೆಂದರೆ ನಮಗಾಗ ಏನೋ ಸಾಧಿಸಿದ ಖುಷಿ. ಒಂದು ಬೆಳಗ್ಗೆ ಹೊಂಟರೆ ಕತ್ತಲಾಗುವಾಗ ಎಲ್ಲರೂ ಒಬ್ಬರ ಮನೆಗೆ ಎಲ್ಲರ ಮೀನನ್ನು ರಾಶಿ ಹಾಕಿ ಹಂಚಿಕೊಳ್ಳುತ್ತಿದ್ದೆವು. 

          ಬೆಳಗ್ಗೆಯಿಂದ ಅಲ್ಲಿಯವರೆಗೆ ಇರದ ಭಯವೋ ಇದರ ನಂತರ ಶುರುವಾಗುತ್ತಿತ್ತು. ಮನೆಗೆ ಮರಳವುದು ಎಂದರೆ ಯಾವುದೋ ಭಯಾನಕ ಜಾಗಕ್ಕೆ ಹೋಗುವ ಹಾಗೆ ಭಾಸವಾಗುತ್ತಿತ್ತು. ಮನೆಗೆ ಮರಳಿದ ನಂತರ ಶುರುವಾಗುತ್ತಿತ್ತು ಬೈಗುಳ. ಎಂತಹ ಬೈಗುಳವೆಂದರೆ ದೇವಸ್ಥಾನದಲ್ಲಿ ಮಂತ್ರ ಹೇಳುವ ಪೂಜಾರಿ ಕೂಡ ಒಮ್ಮೆ ಉಸಿರನ್ನು ತೆಗೆದುಕೊಳ್ಳಲು ಮಂತ್ರ ನಿಲ್ಲಿಸಬಹುದು, ಆದರೆ ನನ್ನಮ್ಮ ಹಾಗಲ್ಲ ಎಕ್ಸ್ಪ್ರೆಸ್ ಟ್ರೈನಿನ ಹಾಗೆ ಒಮ್ಮೆಲೇ ಧೋ ಎಂದು ಸುರಿದ ಮಳೆಯಂತೆ ಇರುತ್ತಿತ್ತು.

            ಎಷ್ಟೇ ಎಂದರು ತಾಯಿ ಪ್ರೀತಿ. ಎಷ್ಟೇ ಬೈದರು ನಂತರ ಬಿಸಿ ಬಿಸಿ ನೀರಿನಲ್ಲಿ ಸ್ನಾನವನ್ನು ಮಾಡಿಸುತ್ತಿದ್ದಳು. ಆದರೆ ತಂದ ಮೀನನ್ನು ಮಾತ್ರ ಚೆಲ್ಲುತ್ತಿರಲಿಲ್ಲ. ಅದನ್ನು ಸ್ವಚ್ಛಗೊಳಿನ ಸಾಂಬಾರನ್ನು ಮಾಡಿ ಅದರ ಜೊತೆಗೆ ತಿನ್ನಲು ಬಿಸಿ ಬಿಸಿ ರೊಟ್ಟಿಯನ್ನು ನೀಡುತ್ತಿದ್ದಳು. ಮೊದಲೇ ಬೆಳಿಗ್ಗೆಯಿಂದ ಏನನ್ನು ತಿನ್ನದ ನಮಗೆ ರೊಟ್ಟಿ ಹಾಗೂ ಮೀನಿನ ಊಟ ಮೃಷ್ಠಾನದಂತೆ ಭಾಸವಾಗುತ್ತಿತ್ತು. 

          ಇದರ ಜೊತೆಗೆ ಮಾರನೇ ದಿನ ನಮ್ಮನ್ನು ಆಸ್ಪತ್ರೆಗೆ ಕರೆದೊಯ್ಯುವ ಕೆಲಸವನ್ನು ನಮ್ಮ ಪಾಲಕರಿಗೆ ಕೊಡುತ್ತಿದ್ದೆವು. ಮೀನು

 ಹಿಡಿಯಲು ಹೋದ ನಾವೆಲ್ಲರೂ ಮರುದಿನ ಒಟ್ಟಿಗೆ ಆಸ್ಪತ್ರೆಗೆ ಹೋಗುತ್ತಿದ್ದೆವು. ಎಲ್ಲರೂ ಮೀನು ಹಿಡಿಯಲು ಹೋಗಿ ಈ ಪರಿಸ್ಥಿತಿಗೆ ಬಂದಿದ್ದಾರೆ ಎಂದು ಡಾಕ್ಟರಗೂ ತಿಳಿಯುತ್ತಿತ್ತು. ಕಾರಣವಿಷ್ಟೇ ಎಲ್ಲರ ಕಾಯಿಲೆ ಹಾಗೂ ವಿಳಾಸ ಒಂದೇ ಆಗಿರುತ್ತದೆ.

           ಆದರೆ ಬೇಸರದ ಸಂಗತಿ ಏನೆಂದರೆ ಇಂದು ಎಲ್ಲವೂ ಬದಲಾಗಿದೆ. ಉದ್ಯೋಗ, ಶಿಕ್ಷಣ ಮುಂತಾದ ಕಾರಣಗಳಿಂದ ಎಲ್ಲರೂ ಪಟ್ಟಣವನ್ನು ಸೇರುತ್ತಿದ್ದಾರೆ. ಜೊತೆಗಾಡಿದವರನ್ನು  ನೋಡಲು ಕಷ್ಟವಾಗುತ್ತಿರುವಾಗ ಅವರೊಂದಿಗೆ ಮೀನನ್ನು ಹಿಡಿಯಲು ಎಲ್ಲಿ ಸಾಧ್ಯ. ಈಗಿನ ಕಾಲದ ಮಕ್ಕಳಿಗಂತೂ ಮೋಜಿ ಮಸ್ತಿ ಮಾಡುವುದರ ಕುರಿತು ಗಾಳಿ ಗಂಧ ಗೊತ್ತಿಲ್ಲ. ಈಗ ಬೀಳುವ ಪ್ರತಿ ಮಳೆ ಹನಿಯೂ ಕೂಡ  ಹೇಳುತ್ತಿದೆ ಪುನಹ ನೀವೆಲ್ಲರೂ ಮರಳಿ ಮಕ್ಕಳಾಗಿ ಎಂದು.          

                                                *ಸಹನಾ ಎಂ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ನಮ್ಮ ಅರಳೇಶ್ವರ

ನೋಡ ಬಾ ನಮ್ಮೂರ ಸಸ್ಯಲೋಕ "

ಡಮಾಮಿ