ಡಮಾಮಿ

 


 

  ಸಿದ್ದಿ ಜನಾಂಗದ ವೈಶಿಷ್ಟ್ಯ ಕಲಾ ಪ್ರಕಾರಗಳಲ್ಲಿ ಡಮಾಮಿ ನೃತ್ಯವು ಒಂದು. ಸಿದ್ದಿಗಳು ಶ್ರಮಜೀವಿಗಳು ಹಿಂದಿನ ಕಾಲದಲ್ಲಿ ದಿನವಿಡಿ ಗುಲಾಮರಾಗಿ ದುಡಿದು ದಣಿದ ಅವರು ಸಂಜೆ ಮನೋರಂಜನೆಗೆಂದು ಮತ್ತು ತಮ್ಮ ಹಿರಿಯರ ಕಾಲಾನಂತರದಲ್ಲಿ ಅವರ ಆರಾಧನೆಯ ದಿನದಂದು ಪ್ರಮುಖವಾಗಿ ಈ ನೃತ್ಯವನ್ನು ಮಾಡುತಿದ್ದರು.  

                   ಡಮಾಮಿ ಎಂಬುದು ಒಂದು ವಿಶಿಷ್ಟವಾದ ಚರ್ಮವಾದ್ಯ . ಇದನ್ನು ನುಡಿಸುತ್ತಾ ಮಹಿಳೆಯರು ಅಥವಾ ಪುರುಷರು ಇಲ್ಲವೇ ಇಬ್ಬರು ಸೇರಿ ಜೋಡಿಯಾಗಿ ಕುಣಿಯುತ್ತಾರೆ . ಹಾಡಿಗೆ ತಕ್ಕಂತೆ ಬಾರಿಸುತ್ತಾ  ವಿವಿಧ ಮಜಲುಗಳಲ್ಲಿ ಕುಣಿಯುವ ಕುಣಿತ ಇದಾಗಿದ್ದು ನೋಡುಗರಿಗೆ ರೋಮಾಂಚನಕಾರಿಯಾದ ನೃತ್ಯ.

      ಸಿದ್ದಿಗಳು ಕಾಡುವಾಸಿಗಳಾಗಿದ್ದರಿಂದ ಇದರ ವೇಷ ಭೂಷಣಗಳು ಸಹಜವಾಗಿ ಕಾಡಿನಲ್ಲಿ ದೊರೆಯುವ ವಸ್ತುಗಳೇ ಆಗಿವೆ. ತಲೆಗೆ ನವಿಲುಗರಿಗಳನ್ನು ಕಟ್ಟಿಕೊಂಡು ಮುಖಕ್ಕೆ ಕಪ್ಪು ಬಿಳಿ ಬಣ್ಣ ಬಳಿದು ಕುತ್ತಿಗೆಗೆ ಸರಗಳು ಸೊಂಟಕ್ಕೆ ಮರದ ಎಲೆಗಳು ಮತ್ತು ಹಿಂದೆ ಪ್ರಾಣಿಗಳ ಚರ್ಮವನ್ನು ಸುತ್ತಿಕೊಳ್ಳುತ್ತಿದ್ದರು.ಬದಲಾಗಿ ಈಗ ಚರ್ಮದ ಬಣ್ಣದ ನಕಲಿ ಬಟ್ಟೆಗಳನ್ನು ಸುತ್ತಿಕೊಂಡು, ಒಟ್ಟಾರೆಯಾಗಿ ಕಾಡಿನಲ್ಲೇ ಸಿಗುವ ವಸ್ತುಗಳಿಂದ ಅಲಂಕಾರ ಮಾಡಿಕೊಂಡು ನೃತ್ಯವನ್ನು ಮಾಡುತ್ತಿದ್ದರು.

              ಈ ಒಂದು ಕಲೆ ಸಿದ್ದಿ ಜನಾಂಗಿಯರಲ್ಲಿ ಅವರ ಪೂರ್ವಜರಿಂದ ಬಹಳ ಹಿಂದಿನಿಂದ ತಲೆಮಾರುಗಳಿಂದ ತಲೆಮಾರುಗಳಿಗೆ ಬಂದಂತಹ ಕಲೆಯಾಗಿದ್ದು ಸಿದ್ದಿಗಳು ಮೂಲವಾಗಿ ಆಗ್ನೇಯ ಆಫ್ರಿಕಾ ಖಂಡದ ಬಂಟು ಜನಾಂಗಕ್ಕೆ ಸೇರಿದವರೆಂದು ಹೇಳಲಾಗುತ್ತದೆ. ಪೋರ್ಚುಗೀಸರು ಇವರನ್ನು ತಮ್ಮ ಗುಲಾಮರನ್ನಾಗಿಸಿಕೊಂಡು ಭಾರತಕ್ಕೆ ಅವರ ಕೆಲಸ ಕಾರ್ಯಗಳನ್ನ ಮಾಡಿಸಿಕೊಳ್ಳಲು ತಂದರು. ಕಾಲಾನಂತರದಲ್ಲಿ ಇಲ್ಲೆ ಉಳಿದುಕೊಂಡ ಅವರು ಅಲ್ಲಲ್ಲಿ ಚದುರಿ ಹೋಗಿದ್ದಾರೆ. ಪ್ರಮುಖವಾಗಿ ಕರ್ನಾಟಕ ಮತ್ತು ಗುಜರಾತ್ ರಾಜ್ಯಗಳಲ್ಲಿ ಇವರನ್ನ ಕಾಣಬಹುದಾಗಿದ್ದು ಕರ್ನಾಟಕದಲ್ಲಿ ಉತ್ತರ ಕನ್ನಡ ಜಿಲ್ಲೆಯ ಕೆಲವು ತಾಲೂಕುಗಳಲ್ಲಿ ನೆಲೆಸಿದ್ದಾರೆ. ಗೋವಾದ ಮೂಲಕ ಕರ್ನಾಟಕಕ್ಕೆ ವಲಸೆ ಬಂದಿದ್ದರಿಂದ ಕೊಂಕಣಿ ಇವರ ಆಡು ಭಾಷೆ. ಅಲ್ಲದೆ ಬಹುತೇಕವಾಗಿ ಡಮಾಮಿ ನೃತ್ಯದ ಎಲ್ಲ ಹಾಡುಗಳೂ ಅವರ ಆಡು ಭಾಷೆ ಕೊಂಕಣಿಯದ್ದೆ ಆಗಿವೆ.  

           ಡಮಾಮಿ ಕುಣಿತದ ಸಾಕಷ್ಟು ಹಾಡುಗಳು ಅಂದಿನ ಸಿದ್ದಿಗಳ ಜೀವನ ಕ್ರಮ, ಸಂಕಷ್ಟಗಳು ಮತ್ತು ಜನಾಂಗದ ಪರಿಸ್ಥಿತಿಯನ್ನು ಭಿಂಬಿಸುತ್ತವೆ. ಅವರು ತಮ್ಮ ಜೀವನದಲ್ಲಿ ನಡೆಯುವ ಪ್ರತಿನಿತ್ಯದ ಘಟನೆಗಳನ್ನೇ ಹಾಡಗಿಸಿ ಕೊಂಡವರು. ಅದರಂತೆಯೇ ಈ ನೃತ್ಯದ ಹಾಡುಗಳು ಬಹುತೇಕವಾಗಿ ಪ್ರೇಮ ಹಿರಿಯರ ದೇವರ ಆರಾಧನೆ ಹೀಗೇ ಇವುಗಳಿಗೆ ಸಂಬಂಧಿಸಿದ ಸಣ್ಣ ಪುಟ್ಟ ಘಟನೆಗಳೇ ಹಾಡಾಗಿರುತ್ತದೆ.

           ಕಾಲಾನಂತರದಲ್ಲಿ ಬೇರೆ ಬೇರೆ ಕಾರಣಗಳಿಂದ ಧಾರ್ಮಿಕವಾಗಿ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಧರ್ಮಗಳಿಗೆ ಹಂಚಿಹೋಗಿದ್ದರೂ  ಸಹ  ಬೇರೆ ಯಾವ ವಿಚಾರಗಳಲ್ಲಿ ಸಿದ್ದಿಗಳು ಭಿನ್ನವಾಗಿದ್ದರೂ ಈ ಒಂದು ಡಮಾಮಿ ಎಂಬ ಕಲೆಯ ವಿಚಾರಕ್ಕೆ ಬಂದಾಗ ನಾವೆಲ್ಲಾ ಸಿದ್ದಿಗಳು ಒಂದು ಎಂಬ ಐಕ್ಯತೆಯ ಭಾವನೆಯನ್ನು ಮೂಡಿಸುವಂತಹ ಮಹತ್ವಪೂರ್ಣವಾದ ಕಲೆ ಇದಾಗಿದೆ.

          ಇಂತಹ ಭವ್ಯವಾದ ಕಲೆಯನ್ನು ಸಿದ್ದಿಜನಾಂಗದವರು ಇಂದಿಗೂ ಜೀವಂತಕಲೆಯಾಗಿ ಉಳಿಸಿಕೊಂಡು ಬಂದಿದ್ದಾರೆ. ಈ ಸಮುದಾಯದವರು ತಮ್ಮ ಹಿರಿಯರು ಹಾಕಿಕೊಟ್ಟ ಮರ್ಗವನ್ನ ಮರೆಯದೆ ಅದೇ ರೀತಿಯ ಮೂಲ ಸಿದ್ದಿಗಳ ಸೊಗಡನ್ನು ಈ ಕಲೆಯಮೂಲಕ ಉಳಿಸಿ ಬೆಳೆಸಿಕೊಂಡು ಬಂದಿದ್ದಾರೆ.

        ಈ ಡಮಾಮಿ ಕಲೆ ಕೇವಲ ಆ ಜನಾಂಗಕ್ಕೆ ಅಷ್ಟೇ ಸೀಮಿತವಾಗಿರದೆ ರಾಜ್ಯ ರಾಷ್ಟ್ರ ಮಟ್ಟದಲ್ಲಿ ಇದನ್ನು ಪ್ರದರ್ಶಿಸುವ ಮೂಲಕ ದೇಶ ವಿದೇಶಗಳಿಗೆ ಈ ಕಲೆಯನ್ನು ಪರಿಚಯಿಸುತ್ತಿದ್ದಾರೆ ಹಾಗೆಯೇ ರಾಜ್ಯದಲ್ಲಿ ಮೆಚ್ಚುಗೆ ಪಡೆದ ಈ ಕಲೆ ಕರ್ನಾಟಕದ ಜನಪದ ಕಲೆಗಳಲ್ಲಿ ಒಂದಾಗಿದೆ. 

  

                     -  ಸಂಜಯ್ ಸಿದ್ದಿ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ನಮ್ಮ ಅರಳೇಶ್ವರ

ಗುಡಿಗಾರ ಸಮಾಜ