"ಇದು ನಮ್ಮ ಯೋಧರ ಬದುಕು"



    ಹುಟ್ಟಿ ಬೆಳೆದ ಊರು ಅದೆಷ್ಟೋ ದೂರವಿದೆ ಒಡಹುಟ್ಟಿದವರ ನೆನಪು ಅದೆಷ್ಟೇ ಬಂದರು ಮನದ ಗೂಡಿನೊಳಗೆ ಬಚ್ಚಿಟ್ಟುಕೊಂಡಿರಬೇಕಾದ ಪರಿಸ್ಥಿತಿ. ಮಳೆ ಇರಲಿ, ಚಳಿ ಇರಲಿ, ಅದೆಂತದ್ದೇ ಕಷ್ಟಕರ ಸನ್ನಿವೇಶವಿರಲಿ ಗಡಿನಾಡಿನ ರಣರಂಗದಲ್ಲಿ ಹೋರಾಡಲೇಬೇಕು. ಇದು ದೇಶವೇ ಉಸಿರು ಎನಿಸಿಕೊಂಡಿರುವ ನಮ್ಮ ಯೋಧರ ಬದುಕು.

         

ನಮ್ಮೂರಿನ ಹುಡುಗರೆಲ್ಲ ಮೈದಾನದಲ್ಲಿ ಕ್ರಿಕೆಟ್,ವಾಲಿಬಾಲ್ ಆಡಿದರೆ ನಮ್ಮ ಯೋಧರು ಕಣಿವೆ ಕಂದರಗಳನ್ನು ಲೆಕ್ಕಿಸದೆ ಜೀವದ ಹಂಗು ತೊರೆದು ಹೋರಾಡುತ್ತಾರೆ. ಅಲ್ಲಿ ಯಾವ ಕೆಕೆ-ಶಿಳ್ಳೆಗಳು ಇಲ್ಲ. ಬರಿಯ ರಕ್ತ-ಸಿಕ್ತ ಮಾಂಸ ಖಂಡಗಳು,ಅಲ್ಲಲ್ಲಿ ಚದುರಿದ ದೇಹದ ತುಣುಕುಗಳು,ಹೃದಯ ವಿದ್ರಾವಕ ಸನ್ನಿವೇಶಗಳು, ಕಣ್ತೆರೆದರೆ ಮೈ ಜುಂ ಎನ್ನಿಸುವ ದೃಶ್ಯಗಳು.ನಾವಿಲ್ಲಿ ಖುಷಿಯಿಂದ ಹಬ್ಬ-ಹರಿದಿನಗಳನ್ನು ಆಚರಿಸುತ್ತಿದ್ದರೆ ನಮ್ಮ ಯೋಧರು ತಾಯ್ನಾಡಿನ ಸೇವೆಗೈಯುವುದರಲ್ಲೇ ನಿರತರಾಗಿರುತ್ತಾರೆ. ವೈರಿಯೊಡನೆ ಕಾಳಗದಲ್ಲಿ ಗೆದ್ದರೆ ಅದೇ ಅವರಿಗೆ ವಿಜಯದಶಮಿ. ನಮ್ಮ ಊಹೆಗೂ ನಿಲುಕದ ನೋವು ಅವರಲ್ಲಿದೆ ಆದರೆ ನೋವಿಗೆ ಸ್ಪಂದಿಸಬೇಕಾದ ಹೆತ್ತವರಾಗಲಿ, ಸಂಬಂಧಿಕರಾಗಲಿ, ಸ್ನೇಹಿತರಾಗಲಿ ಯಾರು ಜೊತೆ ಇಲ್ಲ.


  ಹಾಯಾಗಿ ಹಾಸಿಗೆಯ ಮೇಲೆ ಗಂಟೆ ಎಂಟಾದರೂ ನಿದ್ದೆ ಮಾಡುವ ನಮಗೆ ಇದೆಲ್ಲ ಎಲ್ಲಿ ಅರ್ಥವಾಗಬೇಕು ಹೇಳಿ? ದಿನವಿಡೀ ಮೊಬೈಲ್ ನಲ್ಲಿ ಕಾಲ ಕಳೆಯುವ ನಾವು ಒಂದು ದಿನವಾದರೂ ನಮ್ಮ ವೀರರ ಬಗ್ಗೆ ಯೋಚಿಸಿದ್ದೇವೆಯೇ? ನಮ್ಮಂತೆಯೇ ಜೀವವುಳ್ಳ ಒಬ್ಬ ವ್ಯಕ್ತಿ ಗಡಿಯಂಚಿನಲ್ಲಿ ತನ್ನ ತಾಯ್ನಾಡಿಗೋಸ್ಕರ ಪ್ರಾಣವನ್ನೇ ಪಣಕ್ಕಿಟ್ಟು ಹೋರಾಡುತ್ತಾನೆಂದರೆ ಆ ಜೀವದ ಮೌಲ್ಯ ಎಷ್ಟೆಂದು ಎಂದಾದರೂ ಚಿಂತಿಸಿದ್ದೇವೆಯೇ? 


  ಆ ಬೆಟ್ಟ-ಗುಡ್ಡ ಪರ್ವತ ಕಾನನಗಳಲ್ಲಿ ಅಲೆದಾಡುತ್ತ ಪ್ರತಿಕ್ಷಣವೂ ಎಚ್ಚರಿಕೆಯಿಂದ ಬದುಕು ನೂಕುವ ನಮ್ಮ ಯೋಧರ ಧೈರ್ಯ ಸಾಹಸಗಳಿಗೊಂದಿಷ್ಟು ಸಲಾಂ ಹೇಳಲೇಬೇಕು. ಕಟ್ಟಿಕೊಂಡ ಅದೆಷ್ಟೋ ಆಸೆ,ಕನಸುಗಳು ಕಣಿವೆಯ ಸಂಧಿಯಲ್ಲೇ ಕಮರಿ ಹೋದರು ಮನದಲ್ಲಿ ಅದೆಷ್ಟೇ ಯಾತನೆ ಮನೆ ಮಾಡಿದ್ದರು ಅದೆಲ್ಲವನ್ನು ನಿಗೂಢವಾಗಿ ಕಾಯ್ದುಕೊಂಡು ಹೋಗುವ ನಮ್ಮ ಯೋಧರ ತ್ಯಾಗ ಬಲಿದಾನಗಳನ್ನು ನಿಜಕ್ಕೂ ಸ್ಮರಿಸಲೇಬೇಕು. ಇಲ್ಲದಿದ್ದರೆ ಈ ಬದುಕು ವ್ಯರ್ಥವಾಗುವುದಂತೂ ಸತ್ಯ.




                       ಪ್ರಸನ್ನ N ಮರಾಠಿ

ಎಂ.ಎಂ. ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯ,ಶಿರಸಿ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ನಮ್ಮ ಅರಳೇಶ್ವರ

ಡಮಾಮಿ

ನೋಡ ಬಾ ನಮ್ಮೂರ ಸಸ್ಯಲೋಕ "