ಹಳ್ಳಿಯ ಬಾಳು

 

ನಮ್ಮ ದೇಶದ ರೈತ ನಮ್ಮ ದೇಶದ ಬೆನ್ನು ಮೂಳೆ . ಅವನೇ ನಮ್ಮ ಜನತೆಯ ಜೀವಾಳ. ಅವನಲ್ಲಿ ಅಡಗಿರುವ ಸಂಸ್ಕೃತಿಯೇ ನಮ್ಮ ಪ್ರಾಣವಾಯು. ಪರದೇಶದ ನಾಗರಿಕತೆ ಪ್ರಭಾವಕ್ಕೆ ಒಳಗಾದ ನಾವು  ನಮ್ಮದೆನ್ನುವುದನ್ನೆಲ್ಲ ಕಳೆದುಕೊಂಡಿದ್ದೇವೆ. ಪಾಶ್ಚಾತ್ಯ ನಾಗರಿಕತೆಗೆ ವಿದ್ಯಾವಂತರೆನಿಸಿಕೊಂಡವರು ಬಲಿಯಾಗಿರುವಷ್ಟು ಅವಿದ್ಯಾವಂತರಾದ ಹಳ್ಳಿಯವರು ಒಳಗಾಗಿಲ್ಲವೆಂಬುದು ನಿಜ. ಅಧಿಕ ವಿದ್ಯೆಯನ್ನು ಹೊಂದಿದ ವಿದ್ಯಾವಂತರಿಗೆ ರಾಮಾಯಣ, ಮಹಾಭಾರತ ಚರಿತ್ರೆಗಳು ಕನ್ನಡ ನಾಡಿನಲ್ಲಿದ್ದರೂ ಸಹ ಅದರ ಬಗ್ಗೆ ಸರಿಯಾಗಿ ತಿಳಿದಿಲ್ಲ .ಅಷ್ಟರಮಟ್ಟಿಗೆ ಕೇವಲ ಪಾಶ್ಚಾತ್ಯ ಶಿಕ್ಷಣಕ್ಕೆ ಮಾರುಹೋಗಿದ್ದಾರೆ.

                       

          ಕಾಲಕ್ರಮೇಣವಾಗಿ  ತಮ್ಮ ದೇಶದ ಸಂಸ್ಕೃತಿಯನ್ನು ಮರೆತು ಪಾಶ್ಚಾತ್ಯ ಸಂಸ್ಕೃತಿಗೆ ಮಾರು ಹೋಗುತ್ತಿರುವ ಕಾಲದ ಸುಳಿಯಲ್ಲಿ ಹಳ್ಳಿಗಳು ಸಿಲುಕಿಕೊಂಡಿಲ್ಲ. ಇದಕ್ಕೆ ಕಾರಣ ಇಂಗ್ಲಿಷರ  ರಾಜ್ಯ ಇಲ್ಲಿ 200 ವರ್ಷಗಳಿಂದ ಆಳಿದರೂ  ಹಳ್ಳಿಗಳಿಗೆ ಆ ನಾಗರಿಕತೆಯ ಪ್ರಭಾವ ಹೆಚ್ಚಾಗಿ ಸೋಕಿಲ್ಲದಿರುವುದು, ನಮ್ಮ ಜನ ಯಾವುದನ್ನು ಸ್ವೀಕರಿಸುವುದೂ  ನಿಧಾನ, ಹಳೆಯ ಆಚಾರ- ವಿಚಾರವನ್ನು ಬಿಡುವುದೂ ನಿಧಾನ, ಇದರಿಂದಲೇ ಹಳ್ಳಿಗಳಲ್ಲಿ ಉಳಿದಿರುವ ಸಂಸ್ಕೃತಿ ನಮ್ಮ ಜೀವನದ ನಿಜವಾದ ಜೀವಾಳ.


                ನಾಗರಿಕತೆಗಳಹೋರಾಟಗಳಲ್ಲಿ ನಮ್ಮ ವೈಶಿಷ್ಟಗಳನ್ನು ಕಾಪಾಡಿಕೊಂಡಿರುವುದೇ ಹಳ್ಳಿಗಳ ಸಂಸ್ಕೃತಿ. ರವೀಂದ್ರನಾಥ್  ಟಾಗೂರ್   ಹೇಳಿರುವಂತೆ, "ಭಾರತದ ಧರ್ಮ ಅರಣ್ಯಗಳಲ್ಲಿ ಬೆಳೆದ ಧರ್ಮ"," ಭಾರತದ ನಾಗರಿಕತೆ ಹಳ್ಳಿಗಳ ನಾಗರಿಕತೆ". ನಮ್ಮ ದೇಶದ ರೈತ ಇಂದಿನವನಲ್ಲ, ಅನೇಕ ಶತಮಾನಗಳಿಂದ ಬೆಳೆದು ಬಂದು ನಿತ್ಯ ನಾದವನು. ಅವನ ರಕ್ತದಲ್ಲಿ ನಮ್ಮ ಸಂಸ್ಕೃತಿ ಸೇರಿಕೊಂಡಿದೆ. ಅನೇಕ ಪರ ಸಂಸ್ಕೃತಿಗಳು ಬಂದು ಅಪ್ಪಳಿಸಿದನ್ನು ಅವನು ಜಯಿಸಿಕೊಂಡು ನಿಂತಿದ್ದಾನೆ. ಬಾಳನ್ನು ಬಾಳುವುದರಲ್ಲಿಯೂ, ಪ್ರಕೃತಿ ಸೌಂದರ್ಯವನ್ನು ಸವಿಯುದರಲ್ಲಿಯೂ, ಅವನು ಯಾರಿಗೂ ಕಡಿಮೆ ಇಲ್ಲ.

                         ಬೆವರಿನ  ಆಳಾದ ರೈತ ಸಾಹಸಿ, ಕಷ್ಟ ಜೀವಿ. ಯಂತ್ರದಂತೆ ದುಡಿಯುತ್ತಲೇ ಇರುತ್ತಾನೆ. ಯಾವ ಶ್ರಮವನ್ನು ಅವನು ಲೆಕ್ಕಿಸುವುದೇ ಇಲ್ಲ .ಅವನು ಎತ್ತು ಕೋಣಗಳ ಬಾಲಮುರಿಯುವುದನ್ನು ನಿಲ್ಲಿಸಿ, ಒಂದು ದಿನ ಅವನು ಸೋಮಾರಿ ಆದರೆ, ಜಗತ್ತಿನ ಚಲನೆ ನಿಲ್ಲುತ್ತದೆ. ನಾವು ಯಾವುದನ್ನು ಸುಖ ಎನ್ನುತ್ತೇವೆಯೋ ಅದು ಅವನಿಗೆ ಇಲ್ಲವೇ ಇಲ್ಲ. ಆದರೆ ತಾನು ಮಾಡುವ ಕೆಲಸವನ್ನು ಚೆನ್ನಾಗಿ ಮಾಡುವುದೇ ಅವನಿಗೆ ಸುಖ. ಏನೇ ಮಾಡಲಿ ಅದನ್ನು ಒಂದು ಹೊಸ ಶಿಸ್ತಿನಿಂದ ಅಚ್ಚುಕಟ್ಟಾಗಿ ಒಂದು ಉತ್ಸಾಹದಿಂದ ಮಾಡುತ್ತಾನೆ. ಗೊಬ್ಬರದ ಗಾಡಿಯನ್ನು ಹೊಡೆದರು ಅರುಣನು ಸೂರ್ಯನ ರಥವನ್ನು ನಡೆಸುವ ಜರ್ಬಿನಿಂದಲೇ ಹೊಡೆಯುತ್ತಾನೆ.


 ಪೈರು ಚೆನ್ನಾಗಿ ಬೆಳೆದು ಬಿಟ್ಟರೆ ರೈತನ ಆನಂದಕ್ಕೆ ಪಾರವೇ ಇಲ್ಲ. ಅವನು ಬಯಸುವುದು ಕಷ್ಟಕ್ಕೆ ತಕ್ಕ ಪ್ರತಿಫಲ .                                   

ಫಲದ ಅಪೇಕ್ಷೆ ಇಲ್ಲದೆ ದುಡಿಯುವುದು, ಫಲ ಬಂದಾಗ ಅದು ಭಗವಂತ ವರಪ್ರಸಾದ ಎಂದು  ಅನುಭವಿಸುತ್ತಾನೆ. ಅವನ ಆಸೆಗೂ ಅವನ ಹಸಿವಿಗೂ ಒಂದು ಮಿತಿ ಉಂಟು. ಈ ರೀತಿ ಸರಳ ಜೀವನ ಶೈಲಿ ಎಲ್ಲ ಜನತೆಯಲ್ಲಿದ್ದಿದ್ದರೆ ಕಾಲ ಹೀಗಿರುತ್ತಿರಲಿಲ್ಲ.


                            ರೈತ ಸ್ವಾಭಾವಿಕವಾಗಿ ಸುಸಂಸ್ಕೃತಿಯನ್ನು ಅವನ ಕೈಲಾದಷ್ಟು ಉಳಿಸಿ, ಬೆಳೆಸಿಕೊಂಡು ಬಂದಿದ್ದಾನೆ. ಪಾಶ್ಚಿಮಾತ್ಯರು ಕೇವಲ ಭಾರತೀಯ ಸಂಸ್ಕೃತಿಯನ್ನು ಹೊಗಳುತ್ತಾರೆಯೇ  ಹೊರತು, ಅವರು ತಮ್ಮ ಸಂಸ್ಕೃತಿಯನ್ನು ಮರೆಯುವಷ್ಟರ ಮಟ್ಟಿಗೆ ಬೇರೆ ಸಂಸ್ಕೃತಿಯನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದಿಲ್ಲ. ಆದರೆ ಭಾರತದಲ್ಲಿ ಪಾಶ್ಚಿಮಾತ್ಯದ ಜೀವನ ಶೈಲಿಯ ನಡುವೆ ನಮ್ಮ ಜನಪದ ಜೀವನ ದೂರವಾಗುತ್ತಿದ್ದು ,ಗ್ರಾಮೀಣ ಪ್ರದೇಶದಲ್ಲಿ ಅಲ್ಲಲ್ಲಿ ಉಳಿದುಕೊಂಡಿರುವ ದೊಡ್ಡಾಟ ,ಸಣ್ಣಾಟ ಮತ್ತು ಗ್ರಾಮೀಣ ಸಂಸ್ಕೃತಿಯನ್ನು ಉಳಿಸಿಕೊಳ್ಳದಿದ್ದರೆ ಸಂಪೂರ್ಣವಾಗಿ ನಮ್ಮತನ ನಶಿಸುವುದರಲ್ಲಿ ಯಾವುದೇ ರೀತಿಯ ಸಂದೇಹವಿಲ್ಲ.

                            ಗ್ರಾಮೀಣ ಬದುಕು ಎಂದಾಗ  ನೆನಪಿನಲ್ಲಿ ಉಳಿಯುವುದು ಅಲ್ಲಿಯ ಜನರ ಶ್ರಮ, ಕಸುಬು ,ಆಚರಣೆ ,ಆಡಂಬರವಿಲ್ಲದ ಜೀವನ ಶೈಲಿ, ಸ್ವಾವಲಂಬಿ ಜೀವನ ಹೀಗೆ ಹತ್ತಾರು ದೃಷ್ಟಾಂತಗಳು. ಆರ್ಥಿಕ ಅಭಿವೃದ್ಧಿ ವೇಗ ವರ್ಧನೆ ಗುರಿ ಹಿಂದೆ ಬಿದ್ದ ಕಲಿತ ವಿದ್ಯಾವಂತರು, ನಿಜವಾದ ಬದುಕಿನ ಉಲ್ಲಾಸವನ್ನೇ  ಕಳೆದುಕೊಳ್ಳುತ್ತಿದ್ದಾರೆ .ಬದುಕಿನ ಮೂಲ ನೆಲೆಯನ್ನು ಮರೆತು ,ಕೃತಕ ಬದುಕು ನಡೆಸುತ್ತಿದ್ದಾರೆ. ಕೇವಲ ಕೈಗಾರಿಕಾ ಅಭಿವೃದ್ಧಿ, ಆಧುನಿಕ ಕೃಷಿ ಅಭಿವೃದ್ಧಿ ,ವಿದ್ಯುತ್ ಶಕ್ತಿ ಉತ್ಪಾದನಾ ಉದ್ದೇಶವನ್ನೇ ಮುಂದಿಟ್ಟುಕೊಂಡು ಮಳೆಗಾಲವನ್ನು ನಿರೀಕ್ಷಿಸುವ ಈ ಕಾಲದಲ್ಲಿ, ಮಳೆಗಾಲದ ಸುಂದರ ಸೊಬಗನ್ನು ಆಸ್ವಾದಿಸುವ ಮನೋಭಾವ ಕೇವಲ ಹಳ್ಳಿಯ ಜನತೆಗೆ ಮಾತ್ರ. ತನ್ನ ಅಭಿವೃದ್ಧಿಯೊಂದಿಗೆ ಪ್ರಕೃತಿ ಅಭಿವೃದ್ಧಿಯನ್ನು ಕೊಂಡೊಯ್ಯುವ ಶಕ್ತಿ ಹಳ್ಳಿಯ ಜನರಲ್ಲಿ ಕಾಣಬಹುದು .ತನ್ನ ದುಡಿಮೆಯ ಸಮಯ ಮಿತಿಮೀರಿ ವಾರದ ಒಂದು ದಿನವೂ ರಜೆ ಇಲ್ಲದಂತೆ ನಿರಂತರ ದುಡಿಯುವ ಮಂದಿಗಳನ್ನು ಈಗಿನ ಕಾಲದಲ್ಲಿ ಎಲ್ಲೆಂದರಲ್ಲಿ ಕಾಣುತ್ತೇವೆ .ಇದನ್ನೆಲ್ಲ ಪ್ರಗತಿ ಎಂದು ವ್ಯಾಖ್ಯಾನಿಸಬಹುದು. ಆದರೆ ಹಳ್ಳಿಗಳಲ್ಲಿ ಊರಿನ ಅಂಗಡಿ ,ಹೋಟೆಲ್ ನಲ್ಲಿ ಕುಳಿತು ಪಟ್ಟಾಂಗದಲ್ಲಿ ತೊಡಗುತ್ತಿದ್ದ ಜನರ ನೆಮ್ಮದಿಯ ಬೇರೆ ,ಹಬ್ಬವಂತೆಂದರೆ ಸಂಭ್ರಮಿಸುವ ಬದಲು ಆತಂಕ ಗೊಳ್ಳುವ ಜನರೇ ಇಂದು ಹೆಚ್ಚು, ಯಾಕೆಂದರೆ "ಹಬ್ಬದ ದಿನ ದುಡಿಯುವುದು ಹೇಗೆ"? ಎಂಬ ಚಿಂತೆ.ಹೀಗಾಗಿ ಮನುಷ್ಯರ ನಡುವಿನ ಆತ್ಮೀಯ ಸಂಬಂಧ ಇಲ್ಲಿ ಕಾಣಿಸುವುದು ಬಲು ಕಷ್ಟ.

       

       ಹಳ್ಳಿಯಲ್ಲಿನ ಜೀವನಶೈಲಿಯ ಪ್ರತಿಯೊಂದು ರೀತಿ ವಿಧಾನಕ್ಕೆ ಅದರದ್ದೇ ಆದ ಹೆಚ್ಚಿನ ಮಹತ್ವವಿದೆ. ಇದನ್ನು ಕೆಲ ಜನ ಪಾಶ್ಚಿಮಾತ್ಯ ಸಂಸ್ಕೃತಿಯ ಸೆಳೆತಕ್ಕೆ ಸಿಕ್ಕಿ ಮರೆತಿದ್ದಾರೆ. ಆದರೆ ಉತ್ತಮ ರೀತಿಯಲ್ಲಿನ ಆಚಾರ ವಿಚಾರ  ,ನಾಡಿನ ಸುಸಂಸ್ಕೃತಿಯನ್ನು ಹಳ್ಳಿಯವರೇ ಎತ್ತಿ ಹಿಡಿದಿರುವುದು ಮಾತ್ರ ಎಲ್ಲಿಯೂ ಭಾಸವಾಗುವುದಿಲ್ಲ. ಅವರ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಬೇಕು. ಮಧ್ಯವರ್ತಿಗಳ  ದಾಳಿಯಿಂದ ಇದು ನಶಿಸಬಾರದು. ಇದಕ್ಕೆ ಎಲ್ಲಾ ರೀತಿ ಉಪಯುಕ್ತ ಸಹಕಾರ ಎಲ್ಲೆ ದೊರೆತರೆ ಅಸ್ವಭಾವವಿಕ ಜೀವನಕ್ಕೆ ಹೊಸ ಶಕ್ತಿ ದೊರಕಿ, ನಾಡಿನ ಸಂಸ್ಕೃತಿಯ ಬಾಳಿಗೆ ಸಾರ್ಥಕ್ಯ  ಲಭಿಸುತ್ತದೆ.


                                           ಕವನಾ...

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ನಮ್ಮ ಅರಳೇಶ್ವರ

ಡಮಾಮಿ

ಗುಡಿಗಾರ ಸಮಾಜ