*✰━ ಅಪ್ಪ ಎಂದರೆ ಆಕಾಶ ━✰*


ಅಪ್ಪ ಅಂದ್ರೆ ನಿಷ್ಕಲ್ಮಶ ಪ್ರೀತಿಯನ್ನು ಧಾರೆಯೆರೆದು ಕೊಡುವವನು.  ಅಪ್ಪ ಅಂದ್ರೆ ಕೇಳಿದ್ದನ್ನೆಲ್ಲಾ ಕೈಲಾದಷ್ಟು ಕೊಡಿಸುವವನು... ಅಪ್ಪ ಅಂದ್ರೆ ಕುಟುಂಬದ ಶಕ್ತಿ... ಮಕ್ಕಳಿಗೆ ಮೊದಲ ಹೀರೋ... ಅಪ್ಪ ಅಂದ್ರೆ ಆಕಾಶ...        

           ಪ್ರತಿ ಸಂಸಾರದ ಆಧಾರಸ್ತಂಭವಾಗಿ ಮನೆಯವರ ಪೊರೆಯನ್ನು, ಸಂಭಾಳಿಸುವ ಅದ್ಬುತ ಶಕ್ತಿಯೇ ಅಪ್ಪ ! ಅಮ್ಮ ಮನೆಯ ನಂದಾದೀಪವಾದರೆ ಅಪ್ಪ ಮನೆಯೊಳಗು, ಹೊರಗೂ ಪ್ರಜ್ವಲಿಸುವ ದೀಪ. ಇಡೀ ಜಗವು ಪ್ರತಿ ಬಾರಿ ಅಮ್ಮನನ್ನು ದೈವೀ ಸ್ವರೂಪ,  ಮಮತೆಯ - ಕಾಳಜಿಯ ಸಂಕೇತವೆಂದು ಸಾರುತ್ತದೆ ಆದರೆ ಅಪ್ಪ ಎಂಬ ಅಗಣಿತ ಪ್ರೇಮ,  ಶಿಸ್ತಿನ ಶಕ್ತಿಯನ್ನು ನೆನೆಪಿಸಿಕೊಳ್ಳುವುದು ಕೇವಲ "ಅಪ್ಪಂದಿರ ದಿನಕ್ಕೆ" ಮಾತ್ರ !

              ಮಕ್ಕಳು ಅತ್ತಾಗ, ನೋವಾದಾಗ ಕೂಡಲೇ ತಾಯಿಯು ಕಳವಳಗೊಂಡು ಮಮಕರಿಸಿ, ಒಲುಮೆಯ ಧಾರೆ ಹರಿಸಿ ಸಂತೈಸುವುದು ಹೌದಾದರೂ, ತಂದೆ ಎಂಬ ಭಾವ ತನಗೇನು ಸಂಬಂಧವಿಲ್ಲದಂತೆ ಒಮ್ಮೊಮ್ಮೆ ವರ್ತಿಸಿದರೂ, ಅಮ್ಮ ಮಕ್ಕಳ ಮಮಕಾರವನ್ನು ಕಣ್ಣಲ್ಲೇ ತುಂಬಿಕೊಂಡು, ಒಳಗೊಳಗೇ ಸಂಭ್ರಮಿಸುವ  ಪರಿ ಕೇವಲ ಅಮ್ಮನಿಗೆ ಮಾತ್ರ ತಿಳಿಯುವಂತದ್ದು. ತನ್ನ ಪ್ರೇಮ ಅತಿಯಾದ ಕಾಳಜಿ ತನ್ನ ಮಗುವಿನ ಭವಿಷ್ಯಕ್ಕೆ ತೊಡಕಾಗಬಾರದೆಂದು,  ತನ್ನೆಲ್ಲಾ ಅಕ್ಕರೆಯನ್ನ ಹೃದಯದೊಳಗೆ  ಅದುಮಿಟ್ಟು ಶಿಸ್ತಿನ ಮುಖವಾಡ ಧರಿಸಿ ಕೆಲವೊಮ್ಮೆ ಮಕ್ಕಳ ಪಾಲಿನ ಖಳನಾಗುವುದು ಇದೇ ಅಪ್ಪ !

                ಅಪ್ಪ ಎಂದರೆ ಆಕಾಶ.  ಹೌದು ಅವನು ಆಗಸದಷ್ಟೇ ವಿಶಾಲ ಹೃದಯ, ಅಮ್ಮನ ನಗು - ಅಳುವಿನಲ್ಲಿ ಸಹಭಾಗಿ.  ಅಮ್ಮನೆಂಬ ಪ್ರೇರಕ ಶಕ್ತಿಗೆ ನೆರಳಾಗಿ, ಊರುಗೋಲಾಗಿ, ಬೆಂಗಾವಲಾಗಿ ಹಗಳಿರುಳೆನ್ನದೆ ದುಡಿದು ತನ್ನ ದಣಿವನ್ನೇ ಮಕ್ಕಳ ನಗುವಿನಲ್ಲಿ, ಅಮ್ಮನ ಕಣ್ಣಿನ ಮಿಂಚಿನಲ್ಲಿ ಮರೆಯುವಾತ ಅಪ್ಪ  ! 

                ಧೈರ್ಯ ಸಹನೆಯ ಪ್ರತಿರೂಪ ಅಪ್ಪ. ಮಕ್ಕಳ ಏಳಿಗೆಗಾಗಿ ತನ್ನದೇ ಜೀವನವನ್ನೇ ಮೂಡಿಪಾಗಿಡುವ ಸಾಹುಕಾರ. ಬಡತನವಿರಲಿ ಸಿರಿತನವಿರಲಿ ತನ್ನ ಮಕ್ಕಳಿಗೆ ಏನೂ ಕಡಿಮೆಯಾಗದಂತೆ ನೋಡಿಕೊಳ್ಳಲು  ಬೆವರರಿಸುವ ಕರ್ಮಯೋಗಿ ಅಪ್ಪ !

                ಹೊಡೆದಿರಬಹುದು, ಗದರಿಸಬಹುದು ಅಮ್ಮನಂತೆ ಮುದ್ದಿಸಬಹುದು, ತನ್ನ ಮಕ್ಕಳ  ಏಳಿಗೆಗಾಗಿ ಶಿಸ್ತಿನ ಸಿಪಾಯಿಯಂತೆ ಆದರ್ಶ ಮಕ್ಕಳನ್ನು ಸಮಾಜಕ್ಕೆ ಕೊಡುವ ಅಪ್ಪನ ಶ್ರಮವಂತೂ ಅವಿಸ್ಮರಣೀಯ ತನ್ಮ ಅಂಗಿ ಎಷ್ಟೇ ಹಳೆಯದಾದರೂ ಮಕ್ಕಳಿಗೆ ಹೊಸಬಟ್ಟೆ, ತನ್ಮ ಗಾಡಿ ಗುಜುರಿಗೆ ಬಂದರು ಮಕ್ಕಳಿಗೆ ಹೊಸ ಬೈಕು, ತನ್ನ ಮೊಬೈಲಿನ ಕೀಲಿ ಕೆಟ್ಟರು ಮಕ್ಕಳಿಗೆ ಹೊಸ ಸ್ಮಾರ್ಟ್ಫೋನ್.  ತನ್ನೆಲ್ಲ ತ್ಯಾಗದ ಫಲ ಕೇವಲ ಮಕ್ಕಳಿಗೆ ಮಾತ್ರ. ಇದುವೇ ಅಪ್ಪ  ! 

                ಚಿಕ್ಕವರಿದ್ದಾಗ ನಾವು ಅದೆಷ್ಟೇ ಬಾರಿ ಎಡವಿ ಬಿದ್ದರೂ ಕೈ ಹಿಡಿದು ಎತ್ತುವ ತಂದೆ, ಮಕ್ಕಳು ದೊಡ್ಡವರಾದರೂ ತನ್ನ ಕೈ ಸೋಲುವವರೆಗೂ ಹಿಡಿದೆತ್ತುವ  ಕೆಲಸವನ್ನು ನಿಲ್ಲಿಸುವುದೇ ಇಲ್ಲ. ನಾವು ದೊಡ್ಡವರಾಗಿ, ಶಿಕ್ಷಣ ಸಿಕ್ಕು, ಉದ್ಯೋಗ ದೊರೆತಾಗ ಕಾಣುವುದೇ ಕೇವಲ ದುಡ್ಡು. ಸಿರಿವಂತಿಕೆ ಸಾಮಾಜಿಕ ಸ್ಥಾನವಷ್ಟೇ ಹೊರತು ಅಪ್ಪನ ಶ್ರಮವಾಗಲಿ, ತ್ಯಾಗವಾಗಲಿ ಕಾಣುವುದಿಲ್ಲ. ಎಂತಹ ವಿಪರ್ಯಾಸ !  ನಮ್ಮ ಪ್ರತಿ ಹೆಜ್ಜೆಯಲ್ಲೂ ಹೆಜ್ಜೆ ಗುರುತಾಗಿದ್ದ ನಮ್ಮ ಫೋಷಕರನ್ನು ನಾವು ನಿಜವಾಗಿಯೂ ಗುರುತಿಸಿದ್ದೆ ಆಗಿದ್ದಲ್ಲಿ,  ಇಷ್ಟೊಂದು ವೃದ್ಧಾಶ್ರಮಗಳು ತಲೆ ಎತ್ತುತ್ತಿರಲಿಲ್ಲ, ಅಲ್ಲವರು ಒಂಟಿಯಾಗಿ ನರಳುವ ಪರಿಸ್ತಿತಿಯು ಬರುತ್ತಿರಲಿಲ್ಲ. ಆದರೆ ಕಾಲಚಕ್ರದ ಹೊಡೆತ ಯಾರನ್ನೂ ಬಿಡುವುದಿಲ್ಲ. 


                                 - ಸುಶ್ಮಿತಾ ನಾಯ್ಕ

                                    ಪತ್ರಿಕೋದ್ಯಮ ವಿಭಾಗ 

ಎಂ.ಎಂ. ಕಲಾ & ವಿಜ್ಞಾನ  ಮಹಾವಿದ್ಯಾಲಯ ಶಿರಸಿ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಅಳಿವಿನಂಚಿನಲ್ಲಿರುವ ಕಗ್ಗ

ಪ್ರಕೃತಿಯ ಮಡಿಲಿನಲ್ಲೊಂದು ಸುಂದರ ತಾಣ ಮತ್ತಿಘಟ್ಟ

ಗುಡಿಗಾರ ಸಮಾಜ