ಫ್ರೆಂಡ್ ಅನ್ನೋ ಶಿಪ್ ಗೆ ನಾವೇ ಮೊಳೆ ಹೊಡೆದುಕೊಂಡರೆ ಹೇಗೆ?


 ತುಂಬಾ ಸಲ ಹೀಗಾಗುತ್ತದೆ.


 ಫ್ರೆಂಡ್ ಗೆ ಫೋನ್ ಮಾಡಬೇಕು ಅಂದುಕೊಳ್ಳುತ್ತಿರುತ್ತೇವೆ. ಆದರೆ ಮಾಡಲ್ಲ. ಫೋನ್ ಮಾಡೋಕೆ ಸಾಧ್ಯವಾಗೋಲ್ಲ ಅನ್ನುವುದು ಬೇರೆ ವಿಚಾರ, ಅದಕ್ಕೆ ನೂರೆಂಟು ಕಾರಣಗಳಿರುತ್ತವೆ. ಕೆಲಸದ ಒತ್ತಡ, ಟ್ರಾವೆಲಿಂಗ್, ಮೀಟಿಂಗ್, ಈಟಿಂಗ್, ಆಯಾಸ, ಹುಷಾರಿಲ್ಲ. ಅವಳು ಬ್ಯುಸಿ ಯಾಗಿರಬೇಕು ಬಿಡು ಅಂತ ಇವನು. ಇವನು ಬ್ಯುಸಿ ಯಾಗಿದ್ದಾನೋ ಏನು ಸುಮ್ನೆ ಯಾಕೆ ಡಿಸ್ಟರ್ಬ್ ಮಾಡೋದು ಅಂತ ಅವಳು. ಒಟ್ಟಿನಲ್ಲಿ ನೋ ಕಾಂಟಾಕ್ಟ್, ಫೋನ್ ಮಾಡದೇ ಇರುವುದಕ್ಕೆ ಬ್ಯುಸಿ ಅನ್ನೋದು ಒಂದು ಅಡ್ಡ ನೆಪ ಅಷ್ಟೇ.


 ಆದರೆ ಇನ್ನೊಂದು ಕಾರಣವಿದೆ.

 ಅವನು ಮಾಡಲಿ ಬಿಡು, ಏನು ದಾಡಿ ಅವನಿಗೆ? ಒಂದು ಫೋನ್ ಮಾಡೋದಕ್ಕೆ ಆಗೋಲ್ವಾ? ಪ್ರತಿ ಸಲ ನಾನೇ ಮಾಡ್ಬೇಕಾ? ಅನ್ನೋ ಅಹಂ, ಅದು ಒಂದು ಸಾರಿ ಬಂದು ಇಬ್ಬರ ಮನದಲ್ಲೂ ಕುಳಿತು ಬಿಟ್ಟರೆ ಆ ಫ್ರೆಂಡ್ ಶಿಪ್ ಹಳಿಸಿತು ಅಂತಲೇ ಅರ್ಥ. ಹೀಗಾದಾಗ ಫ್ರೆಂಡ್ ಅನ್ನೋ ಶಿಪ್ ಅಹಂ ಅನ್ನೇ ಅಲೆಯಾಗಿಸಿಕೊಂಡು ಮುಳಗಿ ಹೋಗುತ್ತದೆ.


 ಕೊನೆಗೆ ಫ್ರೆಂಡ್ ಎಲ್ಲೋ ಮರೆತೇ ಹೋಗುತ್ತಾನೆ. ಮಾತು ನಿಂತು ಹೋಗುತ್ತದೆ. ಫೋನ್ ನಂಬರ್ ಮರೆತು ಹೋಗುತ್ತದೆ. ಕೆಲವೇ ದಿನಗಳ ಹಿಂದೆ ಪ್ರತಿಯೊಂದಕ್ಕೂ ಬೇಕಾಗಿದ್ದ ಫ್ರೆಂಡ್ ನ ಸ್ಥಾನಕ್ಕೆ ಇನ್ಯಾರೋ ಒಬ್ಬ ಫ್ರೆಂಡ್ ಬಂದು ಕುಳಿತುಬಿಡುತ್ತಾನೆ. ನೆನಪಿರಲಿ ಆ ಫ್ರೆಂಡು  ಒಂದಲ್ಲ ಒಂದು ದಿನ ಇಂಥ  ಅಹಂನಿಂದಲೇ ಕಳೆದು ಹೋದಾನು. 


 ಅದರಲ್ಲೂ ಇವತ್ತಿನ ದಿನದಲ್ಲಿ ಎಲ್ಲರೂ ಒಂದಲ್ಲ ಒಂಥರಾ ಬ್ಯುಸಿನೆ? ಕಾಲದ ವೇಗಕ್ಕೆ ಎಲ್ಲರೂ ರೆಕ್ಕೆ ಕಟ್ಟಿಕೊಂಡು ಓಡುತ್ತಿರುವವರೇ! ಆ ವೇಗದಲ್ಲಿ ಯಾವ ಫ್ರೆಂಡು ಎಲ್ಲಿ ಕಳೆದು ಹೋಗುತ್ತಾನೋ ಬಲ್ಲವರು ಯಾರು? ನಂಬಿ, ಇವತ್ತಿನ ಆಫೀಸು, ಮನೆ ಎಲ್ಲವೂ ಒಂಥರಾ ಗಡಿಬಿಡಿಯ ಗುಡಾರಗಳೇ! ಯಾರಿಗೂ ಪುರುಸೊತ್ತಿಲ್ಲ. ಪ್ರತಿ ನಿಮಿಷ ಕೂಡ ಇನ್ನಾರಿಗೂ ಬುಕ್ ಆಗಿರುತ್ತದೆ. ಅಂತ ಬ್ಯುಸಿ ಶೆಡ್ಯೂಲ್ ನಡುವೆಯೇ ನಿಮ್ಮ ಫ್ರೆಂಡ್ ಗೋಸ್ಕರ ಒಂದು ಫೋನ್ ಕರೆ ಮಾಡಿ ನೋಡಿ. ನಿಮ್ಮಿಬ್ಬರ ಗೆಳೆತನ ಇನ್ನಷ್ಟು ಗಟ್ಟಿಯಾಗುತ್ತದೆ.


 ಆದ್ರೆ, ಒಂದು ಮಾತು ನೆನಪಿರಲಿ, ನಾವು ಇನ್ನೊಬ್ಬರನ್ನು ಕಡೆಗಣಿಸಿದ ಹಾಗೆ ನಮ್ಮನ್ನು ಇನ್ನೊಬ್ಬ ಕಡೆಗಣಿಸಲು ಕಾಯುತ್ತಿರುತ್ತಾನೆ. ಅಹಂ ಅನ್ನೋದು ಯಾರದೋ  ಮುಲಾಜಿಗೆ ಹುಟ್ಟಿಕೊಳ್ಳುವ ವಂತಹದಲ್ಲ. ಅದೊಂದು ಸಂಬಂಧ ಕೆಲವೊಮ್ಮೆ ರಕ್ತ ಸಂಬಂಧವನ್ನು ಮೀರಿ ನಿಂತುಬಿಡುತ್ತದೆ. ನಮ್ಮ ಒಳಗಣ ಸಂಬಂಧಗಳಾದರೆ ಕೇವಲ ಬೆರಳಣಿಕೆಯಷ್ಟು ಸಿಗಬಹುದು. ಆದರೆ ಈ ಫ್ರೆಂಡ್ ಅನ್ನೋ ಸಂಬಂಧ ಇದೆಯಲ್ಲ ಅದು ಜೀವನದುದ್ದಕ್ಕೂ ಸಿಗುವ ಏಕೈಕ ಒಯಸಿಸ್.



 ನಿತ್ರಾಣವಾಗಿದ್ದಾಗ ಬಂಧುಗಳು ಕೈ ಕೊಟ್ಟಾಗ, ಬದುಕು ಮಕಾಡೆ  ಮಲಗಿದಾಗ "ಇರಲಿ ಬಿಡೋ ನಾನಿದ್ದೇನೆ" ಅಂತ ಕೈ ಹಿಡಿದು ನಡೆಸುವವರು ಫ್ರೆಂಡ್ ಗಳೆ!


 ಹೊಸದಾಗಿ ಫ್ರೆಂಡ್ ಆಗಿದ್ದೀರಲ್ಲ?,ನೀವೆಲ್ಲ  ನನ್ನನ್ನು ಬ್ಯುಸಿಯ ನೆಪದಲ್ಲಿ ಮರೆತು ಬಿಡಬೇಡಿ ಅಂತ ಜ್ಞಾಪಿಸಲಿಕ್ಕೆ...  ಇಷ್ಟೆಲ್ಲ ಹೇಳಬೇಕಾಯಿತು. 

ವಿನಾಯಕ ಪಾಟಿಲ್

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಅಳಿವಿನಂಚಿನಲ್ಲಿರುವ ಕಗ್ಗ

ಪ್ರಕೃತಿಯ ಮಡಿಲಿನಲ್ಲೊಂದು ಸುಂದರ ತಾಣ ಮತ್ತಿಘಟ್ಟ

ಗುಡಿಗಾರ ಸಮಾಜ