ಮಳೆಗಾಲದಲ್ಲಿ ಮಲೆನಾಡು

  ಮಲೆನಾಡು ಕರ್ನಾಟಕದಲ್ಲಿನ ಪ್ರಾಕೃತಿಕ ಸ್ವರ್ಗ.ಮಲೆನಾಡಿನ ಪ್ರದೇಶ ಹಸಿರ ಸೆರಗನ್ನು ಹೊದೆದುಕೊಂಡಿದೆ. ಕಾಡಿನ ಮಧ್ಯೆ ನಿಶಬ್ದವಾಗಿ, ಸ್ವಚ್ಛಂದವಾಗಿ ಹರಿದ ನದಿಗಳ ಸೊಬಗು ವರ್ಣನೆಗೆ ನಿಲುಕದ್ದು.ವನದೇವಿಯ ನಡುನೆತ್ತಿಯಿಂದ ಬೈತಲೆ ತೆಗೆಯುತ್ತ ಶರವೇಗದಲ್ಲಿ ಧುಮುಕುವ ಬೆಳ್ನೊರೆಯ ಜಲಪಾತಗಳನ್ನು ನಿಂತು ನೋಡಿದರೆ ಹಸಿರುಟ್ಟ ಭೂರಮೆಯ ಕಂಠಕ್ಕೆ ತೊಡಿಸಿದ ಬಿಳಿಹತ್ತಿಯ ಗೆಜ್ಜೆ ವಸ್ತ್ರದಂತೆ ತೋರುತ್ತದೆ.ಹೊಟ್ಟೆ ಒಡೆಯುವವರೆಗೂ  ಕೂಗುವ ಮಳೆ ಜಿರಲೆಗಳು ಮಳೆಗಾಲದಲ್ಲಿ ಮಳೆಯೊಂದಿಗೆ ಜುಗಲ ಬಂದಿ ಮಾಡುತ್ತವೆ.

       

              ಅನೇಕ ಕಡೆಗಳಿಂದ ಪ್ರವಾಸಿಗರು  ಮಲೆನಾಡಿನ ಪ್ರಕೃತಿ ಸೌಂದರ್ಯವನ್ನು ಸವಿಯಲು ಬರುತ್ತಾರೆ.ದಾಂಡೇಲಿ, ಕೊಡಗು, ಚಿಕ್ಕಮಂಗಳೂರಿನ ಕಡೆ ಮಾರು ಮಾರಿಗೆ ಸಿಗುವ ರೆಸಾರ್ಟ್ಗಳೇ ಇದಕ್ಕೆ ಸಾಕ್ಷಿಯಾಗಿ


ನಿಲ್ಲುತ್ತವೆ.ಈ ಮಟ್ಟಿಗೆ ಪ್ರವಾಸಿಗರು ಮಲೆನಾಡಿನತ್ತ ಧಾವಿಸಲು ಕುವೆಂಪು ಕಾರಂತರ ಪ್ರಕೃತಿ ವರ್ಣನೆಯು ಕಾರಣವಾಗಿರಬಹುದು. ಇಲ್ಲಿಗೆ ಬಂದು ಟ್ರಕ್ಕಿಂಗ್ ಮಾಡುವುದು, ಕಾಡಿನಲ್ಲಿ ಟೆಂಟ್ ಹಾಕುವುದು ,ರಿವರ್ ರ್ಯಾಪ್ಟಿಂಗ್ ಹೀಗೆ ವಿವಿಧ ಮನೋರಂಜನೆ ಚಟುವಟಿಕೆಗಳಲ್ಲಿ ತೊಡಗಿ ಸಿಹಿ ಕ್ಷಣಗಳನ್ನು ಅನುಭವಿಸುತ್ತಾರೆ.


                ನಾವೆಲ್ಲಾದರೂ ಮಲೆನಾಡು ಬಿಟ್ಟು ಹೊರಗಡೆ ಹೋದಾಗ, ನಮ್ಮ ಊರಿನ ಕುರಿತು ಹೇಳಿದರೆ ಸಾಕು ಖುಷಿಯಾಗಿಬಿಡುತ್ತಾರೆ. ಓ ನೀವು ಅಲ್ಲಿಯವರಾ ?ನೀವು ಪುಣ್ಯವಂತರು ಬಿಡಿ. ಒಳ್ಳೆಯ ವಾತಾವರಣ,ಹಚ್ಚ ಹಸಿರು, ಬೇಕಾದಷ್ಟು ಶುದ್ಧ ನೀರು, ಪ್ರಕೃತಿ ಸೌಂದರ್ಯ, ಜಲಪಾತ, ಮಳೆಗಾಲ ಎಲ್ಲವೂ ಸಿಗುತ್ತೆ. ನಮಗಿಲ್ಲಿ ಬಿಸಿಲು, ಅಶುದ್ಧ ಗಾಳಿ , ವಾಹನಗಳು,ಕಾಂಕ್ರೀಟ್ ಕಾಡುಗಳನ್ನು ಬಿಟ್ಟರೆ  ಬೇರೇನೂ ಕಾಣಸಿಗದು.  ಬೇಸಿಗೆಯಲ್ಲಂತೂ ನೀರಿಗೆ ಹಾಹಾಕಾರ .ಒಂದೋ ಎರಡೋ ನಾನು ಮಲೆನಾಡಿನಲ್ಲೇ ಹುಟ್ಟಬೇಕಿತ್ತು ಅನಿಸುತ್ತದೆ ಎನ್ನುವ ಮಾತುಗಳನ್ನಾಡುತ್ತಾರೆ. ನಮ್ಮ ಊರನ್ನು ಹೊಗಳುತ್ತಿದ್ದರೆ ನಾವು ಆ ಕ್ಷಣಕ್ಕೆ ಉಬ್ಬಿದ ಪುರಿಯಾಗುತ್ತೇವೆ . ಆದರೆ ಮಲೆನಾಡ ಜನರ ಕೆಲವು ತಾಪತ್ರಯಗಳು ಅಲ್ಲಿಯವರಿಗೆ ಮಾತ್ರ ಗೊತ್ತಲ್ಲವೆ?

 

               ಹೌದು . ಮಲೆನಾಡು ನಿಜವಾಗಿಯೂ ಸುಂದರ ತಾಣ. ವರ್ಣನೆಗೆ ನಿಲುಕದ ಪ್ರಕೃತಿ ವೈಭವ ಇಲ್ಲಿದೆ. ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಎಂಬ ಗಾದೆ  ಮಾತಿಗೆ ಒಳ್ಳೆಯ ಉದಾಹರಣೆಯೂ ಹೌದು. ಮಲೆನಾಡಿನ ಜನರು ಹೊರಗಿನವರ ಕಣ್ಣಿಗೆ ಸ್ವರ್ಗದಲ್ಲಿ ಬದುಕುತ್ತಿದ್ದವರಾದರು, ಅನೇಕ ಕಷ್ಟಗಳನ್ನು ಅನುಭವಿಸುತ್ತಿದ್ದಾರೆ. ಅದರಲ್ಲೂ ಹೆಚ್ಚಿನ ಸಮಸ್ಯೆಗಳು ಕಂಡುಬರುವುದೇ ಗ್ರಾಮೀಣ ಭಾಗಗಳಲ್ಲಿ. ಅದರಲ್ಲೂ ವಿಶೇಷವಾಗಿ ಮಳೆಗಾಲದಲ್ಲಿ.  ಗಾಳಿ ಸಹಿತ ಮಳೆ ಸುರಿಯುತ್ತಿದ್ದರೆ ಹಳ್ಳಿಯ ಕಡೆ  ಒಂದು ವಾರಗಳ ಕಾಲ ವಿದ್ಯುತ್ ನ ಪತ್ತೆ ಇರುವುದಿಲ್ಲ. ಮಳೆಗಾಲದಲ್ಲಿ ಮಲೆನಾಡಿನ ಲೈನಮನ್ ಗಳಿಗೆ ಬಿಡುವೇ ಇರುವುದಿಲ್ಲ. ಗುಡ್ಡ ಕುಸಿತದ ಭಯ ಕೆಲವರಿಗಾದರೆ ಇನ್ನೂ ಕೆಲವರಿಗೆ ಮನೆಯ ಸುತ್ತಲೂ ಮರಗಳಿರುವುದರಿಂದ ರಭಸದ ಗಾಳಿಗೆ ಮನೆಯಮೇಲೆ ಮರ ಬಿದ್ದರೆ ಎಂಬ ಆತಂಕ. ಉಳ್ಳವರ ಮನೆಯಲ್ಲಿ ಯು.ಪಿ.ಎಸ್ ಬ್ಯಾಟರಿಯಿಂದ ಎರಡು ದಿನ ವಿದ್ಯುತ್ ಬರುತ್ತದೆ.ಇಲ್ಲದವರು ಚಿಮ್ಮಣಿ ದೀಪದಲ್ಲಿ  ಕಾಲ ಕಳೆಯುತ್ತಾರೆ .ರಸ್ತೆಗಳಂತೂ ಹೋಂಡಮಯ ಕೆಲವು ಕಡೆ ಕೆಸರು ಗದ್ದೆಯಾಗಿರುತ್ತದೆ. ಕೆಲವು ಕಡೆಗಳಲ್ಲಿ ಹೊಳೆ ದಾಟಲು ಇಂದಿಗೂ ಕಾಲು ಸಂಕವೇ ಇದೆ. ನಿರಂತರ ಮಳೆ ಸುರಿಯುವುದರಿಂದ ಅಡಿಕೆ, ಕರಿಮೆಣಸು, ಕಾಫಿ ಬೆಳೆಗಾರರು ಕೊಳೆ ರೋಗದಿಂದ ಹೈರಾಣಾಗುವುದು ಒಂದು ಕಡೆಯಾದರೆ ಎಷ್ಟು ದಿನವಾದರೂ ಒಣಗದ ಬಟ್ಟೆಗಳ ಕಥೆ ಇನ್ನೊಂದು ಕಡೆ. ಜಾನುವಾರುಗಳು ಹೊಳೆಯ ಆಚೆ ಮೇಯಲು ಹೋದಾಗ ದೊಡ್ಡ ಮಳೆ ಬಂದರಂತೂ ಹೊಳೆನೀರು ಕಡಿಮೆ ಆಗುವವರೆಗೆ ಆಚೆಯ ದಡದಲ್ಲಿ ದಿನ ಕಳೆಯಬೇಕಾಗುತ್ತದೆ. ಮತ್ತಲ್ಲದೆ ಚಿರತೆ ಹುಲಿಗಳ ಕಾರಣದಿಂದ ರೈತರು ಜಾನುವಾರುಗಳನ್ನು ಬಿಡಲು ಹೆದರುವ ಪರಿಸ್ಥಿತಿ ಇದೆ.ಜಗತ್ತು ಎಷ್ಟೇ ಮುಂದುವರೆದರು ಗುಡ್ಡದ ಕೆಳಗಿರುವ ಮನೆಗಳಿಗೆ ನೆಟ್ವರ್ಕ್ ಸೌಲಭ್ಯ  ದೊರಕುತ್ತಿಲ್ಲ. ನೆಟ್ವರ್ಕ್ ಹುಡುಕಲು ಗುಡ್ಡ ಹತ್ತಬೇಕಾದ ಪ್ರಸಂಗ.ಎಷ್ಟೋ ಮನೆಗಳ ಬಳಿ ವಾಹನ ಹೋಗುವುದಿಲ್ಲ. ಸರಕುಗಳನ್ನು ಹೊತ್ತು ಸಾಗಿಸಬೇಕು. ಗರ್ಭಿಣಿ ಹೆಂಗಸರನ್ನು, ಅನಾರೋಗ್ಯವಾದವರನ್ನು ಕಂಬಳಿಯಲ್ಲಿ ಹೊತ್ತು ತರಬೇಕು.

              ಇಷ್ಟೆಲ್ಲಾ ತೊಂದರೆ ತೊಡಕುಗಳನ್ನು ಮಲೆನಾಡು ಅಡಗಿಸಿಕೊಂಡಿದೆ. ಆದರೆ ಮಲೆನಾಡೇತರರಿಗೆ ಅದಾವುದೂ ಕಾಣಿಸುವದಿಲ್ಲ. ಪ್ರಕೃತಿ ಸೌಂದರ್ಯ ಅದನ್ನು ಮರೆಮಾಚಿದೆ.ಜಗತ್ತನ್ನೇ ಆಕರ್ಷಿಸುತ್ತಿದೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಅಡಕೆ ಬೀಳದಿರಲಿ ಕೆಳಕ್ಕೆ

ಪ್ರಕೃತಿಯ ಮಡಿಲಿನಲ್ಲೊಂದು ಸುಂದರ ತಾಣ ಮತ್ತಿಘಟ್ಟ

ಅಳಿವಿನಂಚಿನಲ್ಲಿರುವ ಕಗ್ಗ